ಕಾಳಗಿ | ತೆರಿಗೆ ಹಣ ದುರ್ಬಳಕೆ ಆರೋಪ; ಪಿಡಿಓ, ಬಿಲ್ ಕಲೆಕ್ಟರ್ ಅಮಾನತಿಗೆ ಮನವಿ

ಕಲಬುರಗಿ: ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮ ಪಂಚಾಯತಿಯಲ್ಲಿ ತೆರಿಗೆ ಹಣವನ್ನು ನಿಧಿ-1ರ ಹಣವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಎಸಗಿರುವ ಪಿಡಿಓ ಮತ್ತು ಬಿಲ್ ಕಲೆಕ್ಟರ್ ಹಾಗೂ ಸಿಬ್ಬಂದಿ ಓರ್ವನನ್ನು ಕೂಡಲೇ ಕರ್ತವ್ಯದಿಂದ ಅಮಾನತ್ತುಗೊಳಿಸಬೇಕೆಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಂದೀಪ ಭರಣಿ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಾಲಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಟಕಲ್ ಗ್ರಾಮ ಪಂಚಾಯತ್‌ನಲ್ಲಿ ಎಪ್ರಿಲ್ ತಿಂಗಳಿಂದ ಜುಲೈ ತಿಂಗಳವರೆಗೆ ಡಿಸಿಬಿ ಪ್ರಕಾರ ಆನ್‍ಲೈನ್ ಮಶಿನ್ ಮುಖಾಂತರ ವಿವಿಧ ರೀತಿಯ ತೆರಿಗೆ ಹಣವನ್ನು ಸುಮಾರು 3 ರಿಂದ 4 ಲಕ್ಷ ರೂ. ವರೆಗೆ ತೆರಿಗೆ ವಸೂಲಿ ಮಾಡಿರುತ್ತಾರೆ. ಅಲ್ಲದೆ ನಮೂನೆ-3 ನಿಯಮ-20, ತೆರಿಗೆ ಸಾಮಾನ್ಯ ರಸೀದಿ ಪುಸ್ತಕದ ಮುಖಾಂತರ (ಮ್ಯಾನವೆಲ್) ನಗದು ರೂಪದಲ್ಲಿ ಸಮಾರು ಅಂದಾಜು 1-2 ಲಕ್ಷ ರೂ. ಗಳು ತೆರಿಗೆ ವಸೂಲಿ ಮಾಡಿರುತ್ತಾರೆ. ಆನ್‍ಲೈನ್ ಮಶೀನ್ ಮುಖಾಂತರ 3-ರಿಂದ 4 ಲಕ್ಷ ರೂ. ತೆರಿಗೆ ವಸೂಲಿ ಮಾಡಿದ್ದು ಮತ್ತು ಸಾಮಾನ್ಯ ರಶೀದಿ ಪುಸ್ತಕದ ಮುಖಾಂತರ 1-2 ಲಕ್ಷ ರೂ. ಅಂದರೆ ಒಟ್ಟಾರೆಯಾಗಿ ಸುಮಾರು 5-6 ಲಕ್ಷ ರೂ. ತೆರಿಗೆ ಹಣ ಸಂದಾಯವಾಗಿರುತ್ತದೆ. ಈ ತೆರಿಗೆ ಹಣವನ್ನು, ತೆರಿಗೆ ವಸೂಲಿಯಾದ 24 ಗಂಟೆಯೊಳಗೆ ಸರಕಾರದ ನಿಧಿ-1 ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗಿರುತ್ತದೆ. ಕರ ವಸೂಲಿಗಾರರು ಮತ್ತು ಪಂಚಾಯತ್ ಅಭಿವೃಧಿ ಅಧಿಕಾರಿ ಸೇರಿಕೊಂಡು ನಿಧಿ-1 ಬ್ಯಾಂಕ್ ಖಾತೆಗೆ ಹಣ ಜಮಾ ಮಾಡದೆ, ಸರಕಾರದ ನಿಯಮ ಮೀರಿ ಹಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಅಧಿಕಾರವನ್ನು ಬಳಸಿಕೊಂಡು ಸರಕಾರದ ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಅಧಿಕಾರ ದುರ್ಬಳಕೆ, ಕರ್ತವ್ಯ ಲೋಪ, ಕಾನೂನು ಉಲ್ಲಂಘನೆ, ಅಕ್ರಮವಾಗಿ ಹಣ ಲೂಟಿ ಮಾಡಿರುವ ಹಣವನ್ನು ವಾಪಸ್ ಮಾಡಲು ಹೆದರಿ ತಪ್ಪಿಸಿಕೊಳ್ಳಲು ಬೇರೆ ಕಡೆ ವರ್ಗಾವಣೆ ಕೋರಿ ಪತ್ರ ಕರ್ತವ್ಯಕ್ಕೆ ಬರುತ್ತಿಲ್ಲ. ಆದ್ದರಿಂದ ರಟಕಲ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಬಿಲ್ ಕಲೆಕ್ಟರ್ ಮತ್ತು ಸಿಬ್ಬಂದಿ ಓರ್ವರು ಲೂಟಿ ಮಾಡಿರುವ ಸರಕಾರದ ತೆರಿಗೆ ಹಣವನ್ನು ಸರಕಾರದ ಖಜಾನೆಗೆ ಮರಳಿ ಪಡೆಯಬೇಕೆಂದು ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸತೀಶ್ ಕಡೂನ್, ವಿಶ್ವನಾಥ ಡೇಕೂನ್, ವಿರೇಶ ಬೀರನ್, ಅಶೋಕ ಪೂಜಾರಿ, ಶೀವಕುಮಾರ ಸೇರಿದಂತೆ ಇತರರು ಇದ್ದರು.







