ಕಾಳಗಿ | ಜೋಡೆತ್ತು ಉಳಿಸುವ ರೈತರಿಗೆ ಮಾಸಿಕ 11 ಸಾವಿರ ರೂ. ಪ್ರೋತ್ಸಾಹಧನ ನೀಡಲು ಆಗ್ರಹ
153 ಜೋಡೆತ್ತು ಬಂಡಿಗಳಿಂದ ರೈತರ ಬೃಹತ್ ಜಾಥ

ಕಾಳಗಿ: ಸಾಂಪ್ರದಾಯಿಕ ಜೋಡೆತ್ತಿನ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಜೋಡೆತ್ತು ಹೊಂದಿರುವ ರೈತರಿಗೆ ಸರ್ಕಾರ ಮಾಸಿಕವಾಗಿ 11 ಸಾವಿರ ರೂ. ಪ್ರೋತ್ಸಾಹಧನ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಆಗ್ರಹಿಸಿತು.
ಪಟ್ಟಣದ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸುಮಾರು 153 ಎತ್ತಿನ ಬಂಡಿಗಳೊಂದಿಗೆ ಆಗಮಿಸಿದ್ದ ರೈತರಿಗೆ ಪೂಜ್ಯರು ಸನ್ಮಾನಿಸಿ ಪ್ರಮಾಣಪತ್ರ ವಿತರಿಸಿದರು.
ಕಾಳಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಆರು ತಾಂಡಗಳಿಂದ 150ಕ್ಕೂ ಹೆಚ್ಚು ಜೋಡೆತ್ತುಗಳೊಂದಿಗೆ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಜೋಡೆತ್ತುಗಳಿಗೆ ವಿಶೇಷ ಪೂಜೆ ನೆರವೇರಿಸಿ ಬೃಹತ್ ಜಾಥಾಕ್ಕೆ ಚಾಲನೆ ನೀಡಲಾಯಿತು.
ಜಾಥಾವು ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನದಿಂದ ಆರಂಭವಾಗಿ ಮುಖ್ಯ ಬಜಾರ್ ರಸ್ತೆ, ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಸಂಚರಿಸಿತು.
ನಂತರ ರೈತರು ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಜೋಡೆತ್ತಿನ ಕೃಷಿಯನ್ನು ಉಳಿಸಲು ವಿಶೇಷ ಪ್ರೋತ್ಸಾಹಧನ ಹಾಗೂ ಅಗತ್ಯ ನೆರವು ನೀಡುವಂತೆ ಒತ್ತಾಯಿಸಿದರು.
ಈ ವೇಳೆ ಮಂಗಲಗಿ ಡಾ.ಶಾಂತಸೋಮನಾಥ ಶಿವಾಚಾರ್ಯರರು, ರಟಕಲ್ ರೇವಣಸಿದ್ಧ ಶರಣರು, ಕೋಡ್ಲಿ ಬಸವಲಿಂಗ ಶಿವಾಚಾರ್ಯರರು, ಹೊಸ್ಸಳ್ಳಿ ಪೂಜ್ಯ ಸಿದ್ಧಲಿಂಗ ಶಿವಾಚಾರ್ಯರರು, ಕಾಳಗಿ ನೀಲಕಂಠ ಮರಿದೇವರು, ರೈತ ಸಂಘ ರೈತ ಸೇನೆ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ, ರೈತರಾದ ಸಿದ್ರಾಮಪ್ಪ ಕಮಲಪೂರ, ಯುವ ಮುಖಂಡ ನೀಲಕಂಠ ಗುತ್ತೇದಾರ, ಶಿವರಾಜ್ ಪಾಟೀಲ್ ಗೋಣಗಿ, ಪುರಷೋತ್ತಮ್ ಗುತ್ತೇದಾರ, ಜಗದೀಶ್ ಪಾಟೀಲ, ಶೇಖರ್ ಮಾನಶೆಟ್ಟಿ, ಶಿವು ಸಾಲಿಮಠ, ಶರಣಪ್ಪ ಬೇಲೂರ, ಕಾಳಪ್ಪ ಕದ್ದರಗಿ, ಚಂದ್ರಕಾಂತ ಲಕ್ಷ್ಮಣನಾಯಕ ತಾಂಡಾ, ಆಕಾಶ್ ರಾಠೋಡ, ಮಲ್ಲಿಕಾರ್ಜುನ ತೇಲಿ, ಮಲ್ಲಿಕಾರ್ಜುನ ಹೂಗಾರ, ಸುಭಾಸ್ ಹುಳಗೇರಾ, ಶರಣು ಪೂಜಾರಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು ಇದ್ದರು.






