ಕಾಳಗಿ | ಕಂದಗೂಳ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆ : ಸಾಂಕ್ರಾಮಿಕ ರೋಗ ಭೀತಿ

ಕಾಳಗಿ : ತಾಲೂಕಿನ ಗ್ರಾಮ ಪಂಚಾಯತ್ ಕೇಂದ್ರ ಸ್ಥಾನವಾದ ಕಂದಗೂಳ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆಯಿಂದಾಗಿ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜೀವನ ನಡೆಸುವಂತಾಗಿದೆ.
ಗ್ರಾಮದ ಕುರುಬರ ಗಲ್ಲಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳ ಮುಂಭಾಗದಲ್ಲಿ ಹೊಲಸು ನೀರು ನಿಂತಿದ್ದು, ದುರ್ವಾಸನೆ ಹಾಗೂ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಓಣಿಯ ನಿವಾಸಿಗಳು ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಆತಂಕದಲ್ಲಿ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಗ್ರಾಮಸ್ಥರು ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಚರಂಡಿ ದುರಸ್ತಿ ಹಾಗೂ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಗ್ರಾಮದ ಮಹಿಳೆಯೊಬ್ಬರು ಸರಕಾರಿ ಸಾರ್ವಜನಿಕ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿ, ಅದನ್ನು ಧರ್ಮಸ್ಥಳ ಸಂಘದವರಿಗೆ ಬಾಡಿಗೆಗೆ ನೀಡಿ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಚರಂಡಿ ನಿರ್ಮಾಣಕ್ಕೆ ತಕರಾರು ಮಾಡುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ದೂರಿದ್ದಾರೆ.
ಕುರುಬರ ಗಲ್ಲಿ ಹಾಗೂ ಬಾದುನ ಮನೆಯ ಹತ್ತಿರದ ನಿವಾಸಿಗಳು ಸ್ವಂತ ಖರ್ಚಿನಲ್ಲಿ ಚರಂಡಿ ದುರಸ್ತಿ ಮಾಡಲು ಮುಂದಾದರೂ, ಜಾಗ ತಮ್ಮದೇ ಎಂಬ ಕಾರಣ ನೀಡಿ ಮಹಿಳೆಯೊಬ್ಬರು ತಕರಾರು ಮಾಡುತ್ತಿರುವುದರಿಂದ ಸಮಸ್ಯೆ ಕಗ್ಗಂಟಾಗಿ ಉಳಿದಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರಾದ ಗೌರಮ್ಮ ಕುರುಬರ, ಬಂಡಮ್ಮ ಸರಡಗಿ, ನಿಂಬೆಮ್ಮ ಸರಡಗಿ, ಗೌರಬಿ ಮುಲ್ಲಾಗೋಳ, ಸಿದ್ದಣ್ಣ ಹಡಪಾದ, ಶಿವರಾಜ್ ಪೂಜಾರಿ, ಗುರುನಾಥ ಪೂಜಾರಿ, ಬಸಪ್ಪ ಜಿಡಗಿ, ಮಲ್ಲು ಜಿಡಗಿ, ಮಂಜುನಾಥ ಜಿಡಗಿ, ಗುರುನಾಥ ವಾಡೇದ, ಅಶೋಕ ನಾರಂಜಿ, ಆನಂದ ಚನ್ನೂರ, ಬಾಬುರಾವ ಸರಡಗಿ, ಮಲ್ಲಿನಾಥ ಬಾದುನ, ಪ್ರಭುಗೌಡ ರಾಚಟ್ಟಿ, ಈರಣ್ಣ ವಜ್ಜರಗ್ಗಿ, ಗುಂಡಪ್ಪ ಮಹಗಾಂವ್, ಮರ್ತುಜ್ ಅಲಿ ಮುಲ್ಲಾ, ಅನೀಲ ಕೇಶಟ್ಟಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.
“ಮನೆಯ ಮುಂದೆ ಚರಂಡಿಯ ಹೊಲಸು ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೂ ಬಿಡುತ್ತಿಲ್ಲ. ಇದರಿಂದ ಓಡಾಟಕ್ಕೂ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಮಸ್ಯೆ ಪರಿಹರಿಸಬೇಕು.”
-ಬಂಡಮ್ಮ ಸರಡಗಿ, ಕಂದಗೂಳ ಗ್ರಾಮದ ಮಹಿಳೆ
“ನಮ್ಮ ಮನೆಯ ಎದುರುಗಡೆ ಇರುವ ಸಾರ್ವಜನಿಕ ಸ್ಥಳ ಹುಳು–ಹುಪ್ಪಡಿ ಹಾಗೂ ವಿಷಜಂತುಗಳ ವಾಸಸ್ಥಾನವಾಗಿದೆ. ಸ್ವಂತ ಖರ್ಚಿನಲ್ಲಿ ಮುರುಮ ಹಾಕಿ ಸ್ವಚ್ಛಗೊಳಿಸಲು ನಿರ್ಧರಿಸಿದ್ದೇವೆ. ಆದರೆ ಗ್ರಾಮದ ಮಹಿಳೆಯೊಬ್ಬರು ಆ ಜಾಗ ನಮ್ಮದೇ ಎಂದು ತಕರಾರು ಮಾಡುತ್ತಿದ್ದಾರೆ. ಜಾಗ ನಿಮ್ಮದಾದರೆ ದಾಖಲೆ ತೋರಿಸಿ ಎಂದು ಕೇಳಿದರೆ ಜಗಳವಾಡುತ್ತಿದ್ದಾರೆ. ಗ್ರಾಮ ಪಂಚಾಯತ್ ಪಿಡಿಓ ಅವರು ಸ್ಥಳ ಪರಿಶೀಲನೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು.”
-ಮಲ್ಲಿನಾಥ ಚಿತ್ರಶೇಖರ ಬಾದುನ







