ಕಾಳಗಿ | ಕಟಾವಿಗೆ ಬಂದ ಕಬ್ಬು ಖರೀದಿಸಲು ವ್ಯವಸ್ಥೆ ಕಲ್ಪಿಸಿ: ರೇವಣಸಿದ್ಧ ಬಡಾ ಆಗ್ರಹ

ಕಾಳಗಿ: ತೀವ್ರ ಬರಗಾಲದ ನಡುವೆಯೂ ಸಾಲ ಮಾಡಿ, ನೀರಿನ ಕೊರತೆಯನ್ನು ಲೆಕ್ಕಿಸದೆ ಕಷ್ಟಪಟ್ಟು ಕಬ್ಬು ಬೆಳೆದಿರುವ ರೈತರು ಇದೀಗ ಬೆಳೆ ಮಾರಾಟ ಮಾಡಲು ಪರದಾಡುವಂತಾಗಿದೆ. ಕಟಾವಿಗೆ ಬಂದಿರುವ ಕಬ್ಬನ್ನು ಖರೀದಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ರೈತರಲ್ಲಿ ಆತಂಕ ಮೂಡಿಸಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಟಕಲ್ ಅಧ್ಯಕ್ಷ ರೇವಣಸಿದ್ಧ ಬಡಾ ತಿಳಿಸಿದ್ದಾರೆ.
ಮಳೆಯ ಅಭಾವ ಮತ್ತು ನೀರಿನ ಕೊರತೆಯಿಂದ ಕಂಗಾಲಾಗಿದ್ದ ರೈತರು, ಇತರ ನೀರಿನ ಮೂಲಗಳಿಂದ ನೀರು ತಂದು ಹಗಲಿರುಳು ಶ್ರಮಿಸಿ ಕಬ್ಬಿನ ಬೆಳೆಯನ್ನು ಉಳಿಸಿಕೊಂಡಿದ್ದಾರೆ. ಇದಕ್ಕಾಗಿ ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದಾರೆ. ಆದರೆ, ಇದೀಗ ಕಟಾವು ಮಾಡಿ ಮಾರಾಟ ಮಾಡುವ ಹಂತದಲ್ಲಿ ಎದುರಾಗಿರುವ ಸಮಸ್ಯೆಯಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕಬ್ಬು ಮಾರಾಟ ವಿಳಂಬವಾದರೆ ರೈತರಿಗೆ ಭಾರಿ ನಷ್ಟ ಉಂಟಾಗಲಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ, ರಟಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಳೆದಿರುವ ಕಬ್ಬನ್ನು ಖರೀದಿಸಲು ಸಕ್ಕರೆ ಕಾರ್ಖಾನೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಕಬ್ಬು ಕಟಾವು, ಸಾಗಣೆ ಹಾಗೂ ಖರೀದಿಗೆ ತಕ್ಷಣ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.




