ಕಾಳಗಿ | ಟ್ರಾಕ್ಟರ್ ಅಕ್ರಮ ಮಾರಾಟ ಆರೋಪ: ಪಿಡಿಓ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಕಾಳಗಿ : ರಟಕಲ್ ಕೃಷಿ ಪತ್ತಿನ ಸಹಕಾರಿ ಸಂಘಗೆ ಸೇರಿದ ಟ್ರಾಕ್ಟರ್ ಅನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಆರೋಪದ ಮೇಲೆ ರಟಕಲ್ ಗ್ರಾಮ ಪಂಚಾಯಿತಿ ಪಿಡಿಓ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತರು ಹಾಗೂ ಗ್ರಾಮಸ್ಥರು ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ರೇವಣಸಿದ್ಧ ಬಡಾ ಮಾತನಾಡಿ, ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಸೇವೆ ನೀಡಲು ನೀಡಿದ್ದ ಟ್ರಾಕ್ಟರ್ ಅನ್ನು ಪಂಚಾಯಿತಿ ಆವರಣದಲ್ಲಿ ನಿಲ್ಲಿಸಲಾಗಿತ್ತು. ಆದರೆ ಯಾವುದೇ ಟೆಂಡರ್ ಅಥವಾ ಸಾರ್ವಜನಿಕ ಮಾಹಿತಿ ನೀಡದೆ ಪಿಡಿಓ ಟ್ರಾಕ್ಟರ್ ಹಾಗೂ ಹಳೆಯ ಯಂತ್ರಗಳನ್ನು ಅನಧಿಕೃತವಾಗಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಸಂಘದ ಮುಂದಿರುವ ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗಿದ್ದು, ರೈತರಿಗೆ ರಸಗೊಬ್ಬರ ವಿತರಣೆ ಹಾಗೂ ತೊಗರಿ ತೂಕ ಕಾರ್ಯಗಳಿಗೆ ತೊಂದರೆ ಉಂಟಾಗಿದೆ ಎಂದು ದೂರಿದರು.
ತಕ್ಷಣ ಸಮಸ್ಯೆ ಪರಿಹರಿಸಿ, ರೈತರ ಹಿತದೃಷ್ಟಿಯಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ನಂತರ ಪ್ರತಿಭಟನಾಕಾರರು ತಾಪಂ ಇಒ ಡಾ. ಬಸಲಿಂಗಪ್ಪ ಡಿಗ್ಗಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಟಕಲ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ರೇವಣಸಿದ್ಧ ಬಡಾ, ಕಾಶಿನಾಥ್ ಚೌಕಾ ಶರಣಬಸಪ್ಪ ಮಮಶೆಟ್ಟಿ, ವೀರಣ್ಣ ಗಂಗಾಣಿ, ಶಿವರಾಜ್ ಪಾಟೀಲ್ ಗೋಣಗಿ,ಕಲ್ಯಾಣರಾವ ತಳಕೇರಿ, ಗುಂಡಯ್ಯ ಸ್ವಾಮಿ ಮಠಪತಿ, ಮಲ್ಲಿಕಾರ್ಜುನ್ ಬುಳ್ಳ, ಮಲ್ಲಿಕಾರ್ಜುನ ಮರುಗುತ್ತಿ, ವಿಜಯಕುಮಾರ್ ಚೇಂಗಟಿ, ಶರಣು ಪಾಟೀಲ್ ಮೊತಕಪಲ್ಲಿ, ಸೋಮಣ್ಣ ಸಾಹುಕಾರ, ರಮೇಶ್ ಪಾಟೀಲ್, ರವಿ ಬಶೆಟ್ಟಿ, ಶರಣು ಸಿಗಿ ಸೇರಿದಂತೆ ಅನೇಕರು ಇದ್ದರು.






