ಕಾಳಗಿ | ಸಂಭ್ರಮದ ಕನ್ನಡಗಿ ಮಲ್ಲಿಕಾರ್ಜುನ ಪಲ್ಲಕ್ಕಿ ಉತ್ಸವ

ಕಾಳಗಿ: ತಾಲೂಕಿನ ಬೆಣ್ಣೆತೋರಾ ಜಲಾಶಯದ ದಂಡೆಯಲ್ಲಿರುವ ಸುಕ್ಷೇತ್ರ ಕನ್ನಡಗಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರ ಪಲ್ಲಕ್ಕಿ ಉತ್ಸವ ಭಕ್ತಿಭಾವದಿಂದ ಜರುಗಿತು. ಸಾವಿರಾರು ಭಕ್ತರು ಪಾಲ್ಗೊಂಡು ‘ಕನ್ನಡಗಿ ಮಲ್ಲಿಕಾರ್ಜುನ ಮಹಾರಾಜ ಕೀ ಜೈ’ ಎಂಬ ಜಯಘೋಷ ಮೊಳಗಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಸುಕಿನ ಜಾವ ಕನ್ನಡಗಿ ಮಲ್ಲಿಕಾರ್ಜುನ ಮೂಲ ಕರ್ತೃ ಗದ್ದುಗೆ ಹಾಗೂ ದೇವಸ್ಥಾನವನ್ನು ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅರ್ಚಕರ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ, ಧಾರಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿತು.
ಮಧ್ಯಾಹ್ನ ಹೇರೂರ (ಕೆ) ಗ್ರಾಮದ ಮುಖಂಡ ಬಸವರಾಜ ಪಾಟೀಲ ಹೇರೂರ ನೇತೃತ್ವದ ಭಜನಾ ಮಂಡಳಿ ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಅಲಂಕೃತ ಮಲ್ಲಿಕಾರ್ಜುನ ಮೂರ್ತಿಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ದೊರೆಯಿತು. ಸಕಲ ವಾದ್ಯಮೇಳ, ಭಜನೆ, ನಂದಿಕೋಲು ಹಾಗೂ ಪುರವಂತರ ಕುಣಿತದೊಂದಿಗೆ ದೇವಸ್ಥಾನದ ಸುತ್ತ ಐದು ಸುತ್ತು ಭವ್ಯ ಮೆರವಣಿಗೆ ನಡೆಯಿತು. ಭಕ್ತರು ಉತ್ತುತ್ತಿ, ಬಾಳೆಹಣ್ಣು ಹಾಗೂ ನಾಣ್ಯಗಳನ್ನು ಪಲ್ಲಕ್ಕಿಯತ್ತ ಎಸೆದು ಭಕ್ತಿ ಸಮರ್ಪಿಸಿದರು.
ಜಾತ್ರೆಗೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಮಲ್ಲಿಕಾರ್ಜುನನ ದರ್ಶನ ಪಡೆದು ಕಾಯಿ, ಕರ್ಪೂರ ಹಾಗೂ ನೈವೇದ್ಯ ಅರ್ಪಿಸಿದರು. ಭಕ್ತ ಜಗದೀಶ ಜವಳಿ ರಾಜನಾಳ ಅವರು ದೇವಸ್ಥಾನವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದು ಭಕ್ತರ ಗಮನ ಸೆಳೆಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಮಾಲಿಪಾಟೀಲ ಕನ್ನಡಗಿ, ಮುಖಂಡರಾದ ಬಸವರಾಜ ಪಾಟೀಲ ಹೇರೂರ, ಸಿದ್ದಣ್ಣ ತಳವಾರ, ಶಿವಕುಮಾರ್ ಪಾಟೀಲ ಹೇರೂರ, ವಿಜಯಕುಮಾರ್ ಪಾಟೀಲ, ಚನ್ನವೀರಪ್ಪ ಮಾಲಿಪಾಟೀಲ, ವಿಜಯಕುಮಾರ ಪೂಜಾರಿ, ಶಾಮರಾಯ ಕನ್ನಡಗಿ, ಗುರಲಿಂಗಪ್ಪ ಪಾಟೀಲ, ಮಲ್ಲಣ್ಣ ನಾಯಕೋಡಿ, ಶಾಂತಕುಮಾರ ತಳವಾರ, ಎಚ್.ಬಿ. ಪಾಟೀಲ, ಮಲ್ಲಿಕಾರ್ಜುನ ವಕೀಲರು ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.
ಕಾಳಗಿ ಪೊಲೀಸ್ ಠಾಣೆ ಪಿಎಸ್‌ಐ ತಿಮ್ಮಯ್ಯ ಬಿ.ಕೆ. ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.






