ಕಾಳಗಿ | ಬೆಣ್ಣೆತೊರೆ ಕಾಲುವೆಗೆ ವರ್ಷಪೂರ್ತಿ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ

ಕಾಳಗಿ: ತಾಲೂಕಿನ ರೈತರ ಕೃಷಿ ಚಟುವಟಿಕೆಗಳಿಗಾಗಿ ಬೆಣ್ಣೆತೊರೆ ಜಲಾಶಯದ ಕಾಲುವೆಗಳಿಗೆ ವರ್ಷಪೂರ್ತಿ ನೀರು ಹರಿಸಬೇಕು ಹಾಗೂ ಪಂಪ್‌ಸೆಟ್ ವಿದ್ಯುತ್ ಸಮಯವನ್ನು ನಸುಕಿನ ಜಾವ 5 ಗಂಟೆಗೆ ಬದಲಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸಂಘಟನೆ ನೇತೃತ್ವದಲ್ಲಿ ರೈತರು ಮಂಗಳವಾರ ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, “ಈ ಭಾಗದ ರೈತರ ಅನುಕೂಲಕ್ಕಾಗಿ ಸರ್ಕಾರ ಬೆಣ್ಣೆತೊರೆ ಯೋಜನೆಗೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದರೂ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ವರವಾಗಬೇಕಿದ್ದ ಯೋಜನೆ ಶಾಪವಾಗಿ ಪರಿಣಮಿಸಿದೆ” ಎಂದು ಆರೋಪಿಸಿದರು.
“ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ ಸೇರುವ ಬೆಣ್ಣೆತೊರೆ ಬಲದಂಡೆ ಕಾಲುವೆಗೆ ವರ್ಷಪೂರ್ತಿ ನೀರು ಹರಿಯುತ್ತಿದೆ. ಆದರೆ ಚಿಂಚೋಳಿ ಕ್ಷೇತ್ರಕ್ಕೆ ಸೇರಿದ ಎಡದಂಡೆ ಕಾಲುವೆಗೆ ಮಾತ್ರ ಹನಿ ನೀರೂ ಹರಿಯುತ್ತಿಲ್ಲ. ಇದರಿಂದ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರಿಗೆ ಅನ್ಯಾಯವಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಸಿಗೆಯ ತೀವ್ರ ಬಿಸಿಲಿನಿಂದ ಜನ, ಜಾನುವಾರು, ಪ್ರಾಣಿ ಹಾಗೂ ಪಕ್ಷಿಗಳು ಸಂಕಷ್ಟ ಅನುಭವಿಸುತ್ತಿದ್ದು, ಕಾಲುವೆಗಳಿಗೆ ವರ್ಷಪೂರ್ತಿ ನೀರು ಹರಿಸಿದರೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವುದರ ಜೊತೆಗೆ ಜಾನುವಾರುಗಳಿಗೆ ನೀರಿನ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.
ಕಾಳಗಿ, ರಟಕಲ್, ರಾಯಕೋಡ, ಕೋಡ್ಲಿ, ಚಿಂಚೋಳಿ(ಎಚ್), ಹೆಬ್ಬಾಳ, ಹಲಚೇರಾ, ಹುಳಗೇರಾ, ರುದನೂರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರೈತರು ಮನೆ ಸಮಸ್ಯೆ, ಮದುವೆ ಹಾಗೂ ಇತರ ಅಗತ್ಯಗಳಿಗಾಗಿ ಜಮೀನು ಮಾರಾಟ ಮಾಡಿದರೂ, ಹೊಲಗಳ ಸರ್ವೆ, ಟಿಪ್ಪಣಿ, ನಕ್ಷೆ ಹಾಗೂ ಪೋಡಿ ಕೆಲಸಗಳಿಗೆ ಅರ್ಜಿ ಸಲ್ಲಿಸಿ ನಾಲ್ಕೈದು ತಿಂಗಳಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
“ಈ ವಿಳಂಬದಿಂದ ಹಲವರ ಮದುವೆಗಳು ಕೂಡ ಮುರಿದುಬಿದ್ದಿವೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಮಸ್ಯೆ ಬಗೆಹರಿಸಬೇಕು” ಎಂದು ಆಗ್ರಹಿಸಿದರು.
ತಾಲೂಕಿನ ರೈತರು ನೀರಾವರಿ ಬೆಳೆಗಳ ಮೇಲೆ ಅವಲಂಬಿತರಾಗಿದ್ದು, ಪಂಪ್‌ಸೆಟ್ ವಿದ್ಯುತ್ ಸರಬರಾಜಿನ ಅಸಮರ್ಪಕ ವೇಳಾಪಟ್ಟಿಯಿಂದ ಬೆಳೆಗಳು ಹಾನಿಯಾಗುತ್ತಿವೆ. ತೀವ್ರ ಬಿಸಿಲಿನ ಸಮಯದಲ್ಲಿ ವಿದ್ಯುತ್ ನೀಡುವುದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ನಸುಕಿನ ಜಾವ 5 ಗಂಟೆಯಿಂದ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ರೈತರು ಕೃಷಿ ಚಟುವಟಿಕೆಗಳಿಗೆ ಹೊಲಗಳಿಗೆ ತೆರಳಲು ಅನುಕೂಲವಾಗುವಂತೆ ಹಳ್ಳಿಹಳ್ಳಿಗಳ ಸಂಪರ್ಕ ರಸ್ತೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
ನಂತರ ಡೆಪ್ಯುಟಿ ತಹಶಿಲ್ದಾರ್ ಮಾಣಿಕ್ ಘತ್ತರಗಿ ಮೂಲಕ ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಪತ್ರ ಸಲ್ಲಿಸಿದರು.
ರೈತರಾದ ಮಶಾಖಪಟೇಲ್ ಕಲ್ಲಹಿಪ್ಪರಗಿ, ಕಲ್ಯಾಣಿ ಡೊಣ್ಣೂರ, ಕಪೀಲ್ ಚಿಂಚೋಳಿ, ಮಲ್ಲಿಕಾರ್ಜುನ ಗಂವ್ಹಾರ, ಬಾಬು ಮುಸ್ಲಿ, ಶರಣಬಸಪ್ಪ ರ್ಯಾಕಾ, ಸುಭಾಷ್ ಹುಳಗೇರಿ, ಮಲ್ಲಿನಾಥ ಪಾರಾ, ನಾಗರಾಜ ಏರಿ, ಮಲ್ಲಿನಾಥ ತೇಲಿ, ಚಂದ್ರಶಾ ತೇಲಿ, ರಾಮಯ್ಯ ಬೋವಿ, ಶಾಮರಾಯ ನಡಗೇರಿ, ರಮೇಶ ಸಿದ್ಧನಾಕ, ಬಸವಣಯ್ಯ ಮಠಪತಿ, ಪ್ರೇಮಸಿಂಗ್ ಸಾಗರ, ಸುಭಾಷ್ ಸೀಗಿ, ಬಸವರಾಜ ಶಿವಗೋಳ, ಅಂಬರೀಶ್ ಹೆಬ್ಬಾಳ, ಪ್ರಕಾಶ ಇಟಕಿ, ಜಗನ್ನಾಥ ಸೀಗಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.






