ಕಾಳಗಿ | ನಿರಾಶ್ರಿತ ವೃದ್ಧೆಗೆ ಪೊಲೀಸ್ ಇಲಾಖೆಯಿಂದ ಮಾನವೀಯ ನೆರವು

ಕಾಳಗಿ : ಸಮಾಜದಲ್ಲಿ ಆಶ್ರಯವಿಲ್ಲದೆ ಬದುಕು ಸಾಗಿಸುತ್ತಿರುವ ನಿರಾಶ್ರಿತರಿಗೆ ನೆರವಾಗುವಲ್ಲಿ ಪೊಲೀಸ್ ಇಲಾಖೆ ಮಾನವೀಯತೆ ಮೆರೆದ ಘಟನೆ ತಾಲ್ಲೂಕಿನ ಡೊಣ್ಣೂರ ಗ್ರಾಮದಲ್ಲಿ ನಡೆದಿದೆ. ಮಕ್ಕಳ ಆಶ್ರಯದಲ್ಲಿ ಸುಖವಾಗಿ ಜೀವನ ನಡೆಸಬೇಕಾದ ವೃದ್ಧ ಮಹಿಳೆಯೊಬ್ಬರು ಸಂಕಷ್ಟದಲ್ಲಿರುವ ಮಾಹಿತಿ ತಿಳಿದು ಪೊಲೀಸರು ಮಾನವೀಯ ಸ್ಪಂದನೆ ತೋರಿದ್ದಾರೆ.
ಡೊಣ್ಣೂರ ಗ್ರಾಮದ ನಾಗಮ್ಮ ಗಂಡ ಶರಣಪ್ಪ ಕೊಂಡಪಳ್ಳಿ ಅವರು ಅಗತ್ಯ ಸೌಲಭ್ಯಗಳಿಲ್ಲದೆ ಒಂಟಿಯಾಗಿ ಜೀವನ ಸಾಗಿಸುತ್ತಿರುವ ವಿಷಯ ತಿಳಿದ ತಕ್ಷಣ ಶಹಬಾದ್ ವಿಭಾಗದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ವೃತ್ತ ನಿರೀಕ್ಷಕ ಜಗದೇವಪ್ಪ ಪಾಳಾ ಹಾಗೂ ಉಪನಿರೀಕ್ಷಕರಾದ ತಿಮ್ಮಯ್ಯ ಬಿ.ಕೆ. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ಬಸಪ್ಪ ನಾಗೂರ ಅವರು ವೃದ್ಧೆಯ ಮನೆಗೆ ಭೇಟಿ ನೀಡಿ ನೆರವಿನ ಆಸರೆಯಾದರು.
ಈ ವೇಳೆ ದಿನಸಿ ಸಾಮಗ್ರಿಗಳು, ನಿತ್ಯ ಬಳಕೆಯ ವಸ್ತುಗಳು ಸೇರಿದಂತೆ ಅಗತ್ಯ ಸಹಾಯವನ್ನು ವಿತರಿಸಿ, ವೃದ್ಧೆಯ ಆರೋಗ್ಯ ಹಾಗೂ ಸುರಕ್ಷತೆ ಕುರಿತು ಮಾಹಿತಿ ಪಡೆದು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
“ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ಸಂಪರ್ಕಿಸಿ, ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ” ಎಂದು ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಿ ಧೈರ್ಯ ತುಂಬಿದರು.
ಪೊಲೀಸ್ ಇಲಾಖೆಯ ಈ ಮಾನವೀಯ ಸೇವೆಯಿಂದ ವೃದ್ಧ ಮಹಿಳೆಗೆ ಹೊಸ ಬದುಕಿನ ಭರವಸೆ ಮೂಡಿದಂತಾಗಿದ್ದು, ಗ್ರಾಮಸ್ಥರು ಪೊಲೀಸರ ಕಾರ್ಯವನ್ನು ಹೃದಯಪೂರ್ವಕವಾಗಿ ಶ್ಲಾಘಿಸಿದ್ದಾರೆ.
ಸಮಾಜದಲ್ಲಿ ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಇಂತಹ ಕಾರ್ಯಗಳು ಇತರರಿಗೂ ಮಾದರಿಯಾಗಲಿ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.






