ಕಾಳಗಿ | ಸರ್ಕಾರಿ ಶಾಲೆ ಮುಚ್ಚಲು ವಿರೋಧ : ಎಐಡಿಎಸ್ಓ ನೇತೃತ್ವದಲ್ಲಿ ಪಾಲಕರು, ವಿದ್ಯಾರ್ಥಿಗಳ ಪ್ರತಿಭಟನೆ

ಕಾಳಗಿ: ತಾಲೂಕಿನ ಕೋರವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯಾಗಿ ಗುರುತಿಸಿ, ವಚ್ಚಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್‌ಗೆ ವಿಲೀನಗೊಳಿಸಿ ಸಂಪೂರ್ಣವಾಗಿ ಮುಚ್ಚಲು ಸರ್ಕಾರ ಮುಂದಾಗಿರುವ ಕ್ರಮವನ್ನು ಖಂಡಿಸಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಓ ಜಿಲ್ಲಾ ಕೌನ್ಸಿಲ್ ಅಧ್ಯಕ್ಷ ತುಳಜರಾಮ ಎನ್.ಕೆ., ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ರಾಜ್ಯ ಸರ್ಕಾರ ಕ್ರಮೇಣ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸಿದ್ಧತೆ ನಡೆಸುತ್ತಿದೆ ಎಂದು ಆರೋಪಿಸಿದರು.
ಒಂದು ಕಡೆ “ಒಂದು ಮಗು ಇದ್ದರೂ ಶಾಲೆಗೆ ಎಲ್ಲಾ ಸೌಲಭ್ಯ ಒದಗಿಸಲಾಗುತ್ತದೆ, ಶಾಲೆ ಮುಚ್ಚುವುದಿಲ್ಲ” ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಶಾಲೆಗಳ ವಿಲೀನ ಮತ್ತು ಮುಚ್ಚುವಿಕೆ ನಡೆಯುತ್ತಿರುವುದು ಸರ್ಕಾರದ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಸರ್ಕಾರಕ್ಕೆ ನಿಜವಾಗಿಯೂ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಇದ್ದರೆ, ಶಾಲೆಗಳ ವಿಲೀನ ಹಾಗೂ ಮುಚ್ಚುವಿಕೆಯನ್ನು ನಿಲ್ಲಿಸುವ ಕುರಿತು ಲಿಖಿತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 200ಕ್ಕೂ ಹೆಚ್ಚು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಗುರಿಯಾಗಿಸಿಕೊಂಡಿದ್ದು, ಈ ಭಾಗದ ಅಭಿವೃದ್ಧಿಗೆ ಮೀಸಲಾದ ಕೆಕೆಆರ್‌ಡಿಬಿ ನಿಧಿಯ ಹಣವನ್ನು 2 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ದುರುಪಯೋಗಪಡಿಸಲಾಗುತ್ತಿದೆ ಎಂದು ಆರೋಪಿಸಿದರು.
ವಚ್ಚಾ ಗ್ರಾಮದ ಜನರು ಈ ನೀತಿಯ ವಿರುದ್ಧ ಎಚ್ಚೆತ್ತುಕೊಂಡು ಬೃಹತ್ ಜನಾಂದೋಲನ ಕಟ್ಟಬೇಕು. ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚಲು ಬಿಡಬಾರದು ಎಂದು ಅವರು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷ ಗೋವಿಂದ ಯಳವರ, ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಗ್ರಾಮದ ಮುಖಂಡರಾದ ವೀರಭದ್ರಪ್ಪ ಸ್ವಾಮಿ, ಸಂಜುಕುಮಾರ್, ಶರಣು ಪೂಜಾರಿ, ಶ್ರೀನಿವಾಸ್, ಕಾಶಿನಾಥ್, ಶಿವಕುಮಾರ್, ಸಿದ್ದಣ್ಣ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪೋಷಕರು ಪಾಲ್ಗೊಂಡಿದ್ದರು.







