ಕಾಳಗಿ | ಸಮಾಜದಲ್ಲಿ ಶಿಕ್ಷಕರ ಸೇವೆ ಸ್ಮರಣೀಯ : ಕಲಮೂಡ

ಕಾಳಗಿ : ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಸುಮಾರು 18 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದುತ್ತಿರುವ ಶಿಕ್ಷಕ ಮಲ್ಲಪ್ಪ ಜೀವಣಗಿ ಅವರ ನಿವೃತ್ತಿ ಬದುಕು ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಕಲಮೂಡ ಹಾರೈಸಿದರು.
ತಾಲೂಕಿನ ಗೋಟೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆಯೋಜಿಸಿದ್ದ ನಿವೃತ್ತ ಶಿಕ್ಷಕ ಮಲ್ಲಪ್ಪ ಜೀವಣಗಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ನಿಮ್ಮ ಮಾರ್ಗದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅವರು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಪ್ರಾಥಮಿಕ ಶಾಲೆಯಲ್ಲಿ ನೀವು ಕಲಿಸಿದ ಮೌಲ್ಯಗಳು ಮತ್ತು ಜೀವನ ಪಾಠಗಳನ್ನು ಎಂದಿಗೂ ಮರೆಯುವುದಿಲ್ಲ,” ಎಂದು ಹೇಳಿದರು.
ನಿವೃತ್ತ ಶಿಕ್ಷಕ ಮಲ್ಲಪ್ಪ ಜೀವಣಗಿ ಅವರ ಸೇವೆ ಎಲ್ಲ ಶಿಕ್ಷಕರಿಗೂ ಮಾದರಿಯಾಗಿದೆ. ನಿವೃತ್ತಿಯ ನಂತರವೂ ತಮ್ಮ ಅನುಭವವನ್ನು ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘದೊಂದಿಗೆ ಹಂಚಿಕೊಂಡು ಶೈಕ್ಷಣಿಕ ಕ್ಷೇತ್ರಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಅವರು ಆಶಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಕಮಕನೂರ ಮಾತನಾಡಿ, ಒಂದೇ ಶಾಲೆಯಲ್ಲಿ 18 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವುದು ಶ್ಲಾಘನೀಯ ಸಾಧನೆ. ಮುಂದೆಯೂ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅವರ ನಿವೃತ್ತಿ ಜೀವನ ಸಂತೋಷ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದರು.
ನಂತರ ವಯೋನಿವೃತ್ತಿ ಹೊಂದಿದ ಶಿಕ್ಷಕ ಮಲ್ಲಪ್ಪ ಜೀವಣಗಿ ದಂಪತಿಗಳನ್ನು ಗ್ರಾಮಸ್ಥರು ಹಾಗೂ ಶಿಕ್ಷಕರು ಸನ್ಮಾನಿಸಿ ಗೌರವಿಸಿದರು.
ಮುಖಂಡ ವಿಶ್ವನಾಥ ಕಾಮರೆಡ್ಡಿ, ಮಲ್ಲಿಕಾರ್ಜುನ ಸಿಂಘೆ, ಬಾಬು ಬೂಡನೂರ, ಶಿಕ್ಷಕ ಶಂಕರ, ಆರತಿ, ಹೇಮಾ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಧಾನ ಕಾರ್ಯದರ್ಶಿ ಬಸಂತರಾಯ ಪೆದ್ದಿ,
ಎಸ್'ಡಿಎಮ್'ಸಿ ಅಧ್ಯಕ್ಷ ಪ್ರಕಾಶ ಮಡಿವಾಳ, ಪ್ರಮುಖರಾದ ವಿಶ್ವನಾಥರೆಡ್ಡಿ ಮಾಲಿಪಾಟೀಲಣ, ಪರಮೇಶ್ವರರೆಡ್ಡಿ ಬಾವಿ, ಶಿವಶರರೆಡ್ಡಿ ಮಾಲಿಪಾಟೀಲ, ಬಸವರಾಜ ಕಾಮರೆಡ್ಡಿ, ಸಿದ್ದಣ್ಣ ಜಮಾದಾರ, ಗುರಲಿಂಗಪ್ಪ ಮಡಿವಾಳ, ಶಿವಲಿಂಗಪ್ಪ ಮಡಿವಾಳ, ಮಹೇಶ ಸಾವಳಗಿ, ಗಣಪತಿ ಕಲಶೆಟ್ಟಿ, ಚಿತ್ರಶೇಖರ ಅಂಕಲಗಿ, ಪ್ರಕಾಶ ದುರ್ಗಾ, ಅಂಬರಾಯ ಮಡಿವಾಳ ಸೇರಿದಂತೆ ಶಾಲೆಯ ಮುಖ್ಯಗುರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.






