ಕಲ್ಯಾಣ ಕರ್ನಾಟಕ ಉತ್ಸವ : ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿದ ಕಲಬುರಗಿ ನಗರ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಪ್ರಮುಖ ವೃತ್ತಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ಮಾಡಿರುವ ಆಕರ್ಷಕ ವಿದ್ಯುತ್ ದೀಪಾಲಂಕಾರ ಉತ್ಸವದ ಸಡಗರವನ್ನು ಮತ್ತಷ್ಟು ಹೆಚ್ಚಿಸಿದೆ.
ನಗರದ ಎಸ್‌ವಿಪಿ ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಸುತ್ತಮುತ್ತಲಿನ ಪ್ರದೇಶವನ್ನು ವಿಶೇಷವಾಗಿ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ಬಣ್ಣಬಣ್ಣದ ವಿದ್ಯುತ್ ದೀಪಗಳ ಬೆಳಕಿನಲ್ಲಿ ವೃತ್ತ ಕಂಗೊಳಿಸುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ನಗರದ ವಿವಿಧ ಪ್ರಮುಖ ಸರ್ಕಾರಿ ಕಟ್ಟಡಗಳ ಮುಂಭಾಗದಲ್ಲಿಯೂ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ವಿವಿಧ ಬಣ್ಣಗಳ ದೀಪಗಳಿಂದ ಅಲಂಕರಿಸಲಾದ ಕಟ್ಟಡಗಳು ರಾತ್ರಿ ವೇಳೆಯಲ್ಲಿ ಆಕರ್ಷಕವಾಗಿ ಮಿನುಗುತ್ತಿದ್ದು, ಉತ್ಸವದ ವಾತಾವರಣಕ್ಕೆ ಹೊಸ ಮೆರುಗು ನೀಡಿವೆ.
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕೈಗೊಂಡಿರುವ ಈ ದೀಪಾಲಂಕಾರ ನಗರದ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ಉತ್ಸವದ ಸಂಭ್ರಮವನ್ನು ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗಿಸಿದೆ.
ರಾತ್ರಿ ವೇಳೆಯಲ್ಲಿ ದೀಪಾಲಂಕಾರ ವೀಕ್ಷಿಸಲು ಸಾರ್ವಜನಿಕರು ಪ್ರಮುಖ ವೃತ್ತಗಳು ಹಾಗೂ ಸರ್ಕಾರಿ ಕಟ್ಟಡಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ನಗರದಾದ್ಯಂತ ಹಬ್ಬದ ವಾತಾವರಣ ಕಂಡುಬರುತ್ತಿದೆ.






