ಕಲ್ಯಾಣ ಕರ್ನಾಟಕ ಸಾಹಿತಿಗಳಿಗೆ ಸೂಕ್ತ ವೇದಿಕೆ ಅಗತ್ಯ: ಮುಡುಬಿ ಗುಂಡೇರಾವ

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳಿಗೆ ಸೂಕ್ತ ವೇದಿಕೆಯಿಲ್ಲದೆ ಹಲವಾರು ಪ್ರತಿಭೆಗಳು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಶಸ್ತಿಗಳು ಹಾಗೂ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಂತಹ ಉನ್ನತ ಗೌರವ ಸ್ಥಾನಮಾನಗಳು ನಮ್ಮ ನೆಲದ ಸಾಹಿತಿಗಳಿಗೆ ದೊರಕುವಂತಾಗಬೇಕು ಎಂದು ಸಂಶೋಧಕ ಸಾಹಿತಿ ಹಾಗೂ ಕಲಬುರಗಿ ಜಿಲ್ಲಾ 22ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಮುಡುಬಿ ಗುಂಡೇರಾವ ಅಭಿಪ್ರಾಯಪಟ್ಟರು.
ನಗರ ಸಮೀಪದ ಉಪಳಾಂವ ಗ್ರಾಮದ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯ ಆವರಣದಲ್ಲಿ ಶ್ರೀ ಜೈಸಂತೋಷಿ ಮಾತಾ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕವಯತ್ರಿ ಚಂದ್ರಕಲಾ ಎಂ. ಪಾಟೀಲ ರಚಿಸಿದ ಎಡಚರು, ಸಾಹಿತ್ಯ ಸುಗಂಧ, ಲೇಖನ ಲೋಕದ ದೀಪಗಳು ಹಾಗೂ ಸಾಹಿತಿ ಶಾಂತಮಲ್ಲಪ್ಪ ಕರಿಕಲ್ ಕಣ್ಣಿ ರಚಿತ ಚಂದದ ಕನ್ನಡ ನುಡಿ ಮುಂಜಾನೆಯ ಮಾತುಗಳು ಮತ್ತು ಡಾ. ಲೀಲಾ ಗುರುರಾಜ ಅವರ ಮಳೆಬಿಲ್ಲು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡದ ಪ್ರಥಮ ಗ್ರಂಥ ಕವಿರಾಜಮಾರ್ಗ ನೀಡಿದ ಹೆಗ್ಗಳಿಕೆ ಕಲಬುರಗಿ ನೆಲಕ್ಕೇ ಸೇರಿದ್ದು, ಈ ಭಾಗದ ಸಾವಿರಾರು ಸಾಹಿತ್ಯ ಪ್ರತಿಭೆಗಳು ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಿವೆ. ಅವರ ಸಾಧನೆಯನ್ನು ಗುರುತಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಪ್ರೌಢಶಾಲೆಯ ಆದರ್ಶ ಶಿಕ್ಷಕಿಯಾಗಿರುವ ಚಂದ್ರಕಲಾ ಎಂ. ಪಾಟೀಲ ಅವರು ತಮ್ಮ ಕರ್ತವ್ಯದ ಜೊತೆಗೆ ಸಾಹಿತ್ಯ ಕೃಷಿಯನ್ನೂ ಮುಂದುವರಿಸಿರುವುದು ಇತರರಿಗೆ ಮಾದರಿಯಾಗಿದೆ. ಎಡಗೈಯಿಂದ ಬರೆಯುವವರ ಕುರಿತು ಸಾಹಿತ್ಯ ರಚನೆ ಮಾಡಿರುವುದು ವಿನೂತನ ಪ್ರಯೋಗವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕ ವೃತ್ತಿಯ ಜೊತೆಗೆ ಉತ್ತಮ ಸಾಹಿತ್ಯ ರಚನೆ ಮಾಡುತ್ತಿರುವ ಚಂದ್ರಕಲಾ ಎಂ. ಪಾಟೀಲ ಅವರ ಕಾರ್ಯ ಶ್ಲಾಘನೀಯವಾಗಿದೆ. ಸಾಹಿತ್ಯದಿಂದ ಸಮಾಜ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಲಬುರಗಿ ನೆಲದ ಸಾಹಿತ್ಯ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಹಲವು ವರ್ಷಗಳಿಂದ ಮಾಡುತ್ತಿದ್ದೇನೆ. ನಮ್ಮ ಭಾಗದ ಸಾಹಿತಿಗಳು ಬೇರೆ ಯಾವ ಭಾಗದವರಿಗಿಂತಲೂ ಕಡಿಮೆಯಿಲ್ಲ. ಕಸಾಪ ವತಿಯಿಂದ ಸೂಕ್ತ ವೇದಿಕೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಡಚರು, ಸಾಹಿತ್ಯ ಸುಗಂಧ, ಮಳೆಬಿಲ್ಲು ಕೃತಿಗಳ ಕುರಿತು ಕೆ. ಹರೀಶ ಡೋಂಗ್ರೆ, ಚಂದದ ಕನ್ನಡ ನುಡಿ ಮುಂಜಾನೆಯ ಮಾತುಗಳು ಕೃತಿಯ ಕುರಿತು ಷಣ್ಮುಖಯ್ಯ ಎಂ. ಸ್ವಾಮಿ ಹಾಗೂ ಲೇಖನ ಲೋಕದ ದೀಪಗಳು ಕೃತಿಯ ಕುರಿತು ಡಾ. ಲೀಲಾ ಗುರುರಾಜ ಪರಿಚಯಿಸಿದರು.
ಮಹಿಳಾ ನೌಕರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಾ ಡಾಂಗೆ, ನಿವೃತ್ತ ನಾಲ್ಕು ಚಕ್ರ ಚಾರಿಟೇಬಲ ಟ್ರಸ್ಟ್ ಅಧ್ಯಕ್ಷೆ ಮಾಲಾ ಎಚ್.ಕಣ್ಣಿ, ಹಿರಿಯ ಸಾಹಿತಿ ಶಾಂತಾ ಪಸ್ತಪುರ ಕೃತಿಯ ಲೇಖಕರಾದ ಚಂದ್ರಕಲಾ ಎಂ.ಪಾಟೀಲ, ಏ ಹರೀಶ ಡೋಂಗ್ರೆ ಡಾ.ಲೀಲಾ ಗುರುರಾಜ, ಸಾಹಿತಿ ಶಾಂತಮಲ್ಲಪ್ಪ ಕರಿಕಲ್ ಕಣ್ಣಿ ಮುಂತಾದವರು ಮಾತನಾಡಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಜ್ಯೋತಿ ಪಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮುಖ್ಯಸ್ಥ ಗೌಡೇಶ ಬಿರಾದಾರ, ಸಂಘಟಕ ನೀಲಕಂಠೇಶ್ವರ, ಮುಖ್ಯೋಪಾಧ್ಯಾಯಿನಿ ಮಹಾದೇವಿ ಪಾಟೀಲ, ಕಸಾಪ ಗೌರ ಕಾರ್ಯದರ್ಶಿ ಶಿವರಾಜ ಅಂಡಗಿ, ಪತ್ರಕರ್ತ ರಾಜು ಅಪ್ಪಾಜಿ, ಹಣಮಂತರಾಯ ಭೈರಾಮಡಗಿ, ಪ್ರಮುಖರಾದ ವಿಶ್ವನಾಥ ಗೌನಳ್ಳಿ, ರಾಘವೇಂದ್ರ ಭಕ್ರಿ, ರಾಜೇಂದ್ರ ಝಳಕಿ, ಅನ್ನಪೂರ್ಣ ಸಂಗೋಳಗಿ, ಚೈತ್ರಾ, ಶಿವಶರಣಪ್ಪ ಅಂತಪನಳ್ಳಿ, ಅಣವೀರಪ್ಪಗೌಡ, ಜಗದೀಶ ಹಿರೇಮಠ, ವಿಜಯಕುಮಾರ ಪಾಟೀಲ ಆಡಕಿ, ಶಿವಶರಣಪ್ಪ ಹೂಗಾರ, ಗೂಳಿನಾಥ ಸಾಹುಕಾರ, ಗುಂಡಮ್ಮ, ಸೇರಿದಂತೆ ಮುಂತಾದವರಿದ್ದರು. ಎಡಚುಗೈ ಸಾಧಕರಿಗೆ, ಪ್ರಕಾಶಕರಿಗೆ, ಗ್ರಂಥ ಸಂಪಾದಕ ಮಂಡಳಿ ಸದಸ್ಯರನ್ನು ಸತ್ಕರಿಸಲಾಯಿತು. ಶಾಂತಮಲ್ಲಪ್ಪ ಕರಿಕಲ ಕಣ್ಣಿ ಸ್ವಾಗಿಸಿದರು. ತಪಿತಾ ನಿರೂಪಿಸಿದರು. ಸಿದ್ದಣಗೌಡ ಪಾಟೀಲ ವಂದಿಸಿದರು.






