ಕಲ್ಯಾಣ ಕರ್ನಾಟಕದ ಇತಿಹಾಸವೇ ಕರ್ನಾಟಕದ ಇತಿಹಾಸವಾಗಬೇಕು : ಸಿಎಂ ಡಿ.ಕೆ.ಶಿವಕುಮಾರ್
ಕಲಬುರಗಿಯಲ್ಲಿ ಅದ್ಧೂರಿ ಸ್ಟ್ರೀಟ್ ಫೆಸ್ಟಿವಲ್‌ಗೆ ಚಾಲನೆ

ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವೇಗವನ್ನು ಕಲಬುರಗಿ ನಗರ ತೋರಿಸಿಕೊಡುತ್ತಿದ್ದು, ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ಕಲಬುರಗಿ ಸಾಬೀತುಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಆಯೋಜಿಸಿರುವ ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳ ಸ್ಟ್ರೀಟ್ ಫೆಸ್ಟಿವಲ್‌ಗೆ ಬುಧವಾರ ಸಂಜೆ ಚಾಲನೆ ನೀಡಿ, ಅಪ್ಪ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಕಲ್ಯಾಣ ಕರ್ನಾಟಕ ಯಾವ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ ಎಂಬುದು ಈಗ ಎಲ್ಲರಿಗೂ ಗೋಚರಿಸುತ್ತಿದೆ. ಟೀಕೆ ಮಾಡುವುದಕ್ಕಿಂತ ನಗುನಗುತ್ತಾ ಈ ಸಂಭ್ರಮವನ್ನು ಆಚರಿಸಬೇಕು ಎಂಬುದು ನನ್ನ ಆಶಯ. ನಾವೆಲ್ಲರೂ ಒಟ್ಟಾಗಿ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂಬ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇವೆ,” ಎಂದು ಹೇಳಿದರು.
ಕಲಬುರಗಿಯಲ್ಲಿ ಶುದ್ಧ ಹಾಗೂ ಸುಂದರ ಪರಿಸರ ನಿರ್ಮಾಣವಾಗಿರುವುದನ್ನು ಶ್ಲಾಘಿಸಿದ ಅವರು, ಪುಟಾಣಿ ಮಕ್ಕಳು, ಹಿರಿಯರು ಹಾಗೂ ಮಹಿಳೆಯರು ಕಾರ್ಯಕ್ರಮವನ್ನು ನೋಡಿ ಸಂಭ್ರಮಿಸುತ್ತಿರುವುದು ಸಂತೋಷ ತಂದಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕಲಬುರಗಿ ಜನತೆಗೆ ಅಭಿನಂದನೆಗಳು ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಇತಿಹಾಸವೇ ಕರ್ನಾಟಕದ ಇತಿಹಾಸವಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿದ ಡಿ.ಕೆ. ಶಿವಕುಮಾರ್, ಈ ಭಾಗದ ಅಭಿವೃದ್ಧಿಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆಯನ್ನು ಸ್ಮರಿಸಿದರು.
ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚಿನ ಅವಕಾಶಗಳು ದೊರೆಯುವಂತೆ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರ ಪಾತ್ರ ಮಹತ್ವದ್ದಾಗಿದೆ. ಈ ಭಾಗಕ್ಕೆ ಅವರು ನೀಡಿರುವ ಕೊಡುಗೆ ಅನನ್ಯವಾಗಿದೆ ಎಂದರು.
3ಡಿ ಲೈಟ್ ಶೋ, ಡ್ರೋನ್ ಶೋ ಆಕರ್ಷಣೆ :
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ 3ಡಿ ಲೈಟ್ ಶೋ ಹಾಗೂ ಡ್ರೋನ್ ಶೋ ಸಾರ್ವಜನಿಕರ ಗಮನ ಸೆಳೆಯಿತು. ವೈವಿಧ್ಯಮಯ ಸಾಂಸ್ಕೃತಿಕ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳೊಂದಿಗೆ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಚಿವ ಡಾ.ಅಜಯ್ ಸಿಂಗ್, ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ್, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಶೇಖ್ ಅಜ್ಮಲ್ ಅಹಮದ್ ಗೋಳಾ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






