ಕಮಲಾಪುರ | ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾಗಿ ಜಿತೇಂದ್ರ ತಳವಾರ ಅವಿರೋಧ ಆಯ್ಕೆ

ಕಮಲಾಪುರ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026ನೇ ಸಾಲಿನ ಚುನಾವಣೆಯಲ್ಲಿ ಕಮಲಾಪುರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಜಿತೇಂದ್ರ ತಳವಾರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಸವರಾಜ ಸಿಂಧನಕೇರಾ ತಿಳಿಸಿದ್ದಾರೆ.
ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಜಿತೇಂದ್ರ ತಳವಾರ ಅವರ ನಾಮಪತ್ರ ಮಾತ್ರ ಸಲ್ಲಿಕೆಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಿತೇಂದ್ರ ತಳವಾರ ಅವರನ್ನು ಶಿಕ್ಷಕ ವೃಂದ ಹಾಗೂ ಸಂಘದ ಪದಾಧಿಕಾರಿಗಳು ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಲಾಯಿತು.
ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದು, ಸಂಘದ ಬಲವರ್ಧನೆ ಹಾಗೂ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನಾಗರಾಜ ಹಳ್ಳಿಮನಿ, ಖಜಾಂಚಿ ಅಂಬರಾಯ ಮಡ್ಡೆ, ನಿರ್ದೇಶಕರಾದ ನಿಂಗಣ್ಣ ಕಿಲ್ಲಾಧಾರ್, ಶಂಕರನಾಗ್ ಜೀವಣಗಿ, ಪ್ರದೀಪ ಪ್ರಬುದ್ಧಕರ್, ಲಾಡ್ಲ್ ಸಾಬ್, ವಿಶಾಲ ಬ್ಯಾನರ್ಜಿ ಹಾಗೂ ಶಿಕ್ಷಕರಾದ ಸತೀಶ್ ಹಳ್ಳಿ, ಯಲ್ಲಾಲಿಂಗ ಬಬಲಾದಕರ್, ಸುಧಾಕರ್ ವಾಲಿ, ಶಿವಕುಮಾರ್, ಶರಣು ಸೇರಿದಂತೆ ಹಲವರು ಉಪಸ್ಥಿತರಿದ್ದರು.






