ಕಲಬುರಗಿ | ದಾಸ ಪರಂಪರೆಯಲ್ಲಿ ಶ್ರೇಷ್ಟರಾದವರು ಕನಕದಾಸರು : ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು

ಕಲಬುರಗಿ: ದಾಸ ಪರಂಪರೆಯಲ್ಲಿ ಕನಕದಾಸರು ಶ್ರೇಷ್ಠರಾಗಿದ್ದರು. ಅವರು ಹಿಂದುಳಿದ ವರ್ಗದ ಧ್ವನಿಯಾಗಿ ಅನ್ಯಾಯ ಅತ್ಯಾಚಾರಿಗಳ ವಿರುದ್ದ ಹೋರಾಟ ಮಾಡಿ ಮಹಾನ್ ನಾಯಕರಾಗಿದ್ದರು. ಇವರ ಆದರ್ಶ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ಶನಿವಾರದಂದು ನಗರದ ಡಾ. ಎಸ್. ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇದರ ಸಂಯುಕ್ತಾಶ್ರಯದಲ್ಲಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಶ್ರೀ ಕೃಷ್ಣನ ದರ್ಶನ ಪಡೆಯಲು ಹೋದಾಗ ಗುಡಿಯ ಹಿಂದುಗಡೆ ನಿಂತು ದರ್ಶನ ಮಾಡಿದ್ದಾಗ ಶ್ರೀ ಕೃಷ್ಣನು ಕನಕದಾಸರಿಗೆ ಪ್ರತ್ಯಕ್ಷನಾಗಿದ್ದನು. ಕುರುಬ ಸಮಾಜದಲ್ಲಿ ಹುಟ್ಟಿ ಸಮಾನತೆಗಾಗಿ ಹೋರಾಡಿ ಅನೇಕ ಸಮಾಜದಲ್ಲಿ ಪರಿವರ್ತನೆ ಮಾಡಿ ದಾಸ ಸಾಹಿತ್ಯ ರಚಿಸಿದರು ಎಂದರು.
ಕಾರ್ಯಕ್ರಮದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವ ಕುಲದ ಸಮಾನತೆಯನ್ನು ಎತ್ತಿ ಹಿಡಿದವರು ಕನಕದಾಸರು, ಭಗವಂತ ಕೂಡ ಕನಕದಾಸರ ಭಾವನೆ ಇಂಬು ಕೊಟ್ಟಂತೆ ಅವರಿರುವ ಕಡೆಗೆ ತಿರುಗಿ ದರ್ಶನ ನೀಡಿ ತಾನು ಭೇದ ಬಯಸುವವನಲ್ಲ ಎಂದು ಜಗತ್ತಿಗೆ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.
ವಿಜಯ ನಗರದಲ್ಲಿ ಕನಕರಿಗೆ ಸಿಕ್ಕಂತ ಬಂಗಾರವನ್ನು ಅನೇಕ ಬಡ ವರ್ಗದವರಿಗೆ ದಾನ ಮಾಡಿದರು. ಕೆರೆ ಕಟ್ಟಿಗಳನ್ನು ಕಟ್ಟಿದರು. ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎಲ್ಲರೂ ಸಮಾನತೆಯಿಂದ ಬಾಳಲು ಐದು ಗ್ಯಾರೆಂಟಿ ಯೋಜನೆಗಳನ್ನು ತಂದಿದ್ದಾರೆ, ಅಲ್ಲದೆ ರಾಜ್ಯದಲ್ಲಿ ಹೆಚ್ಚಿನ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಸ್ವಾಗತಿಸಿದರು. ಸಾಹಿತಿ ಹಾಗೂ ಚಿಂತಕ ಡಾ. ಶ್ರೀಶೈಲ್ ಎನ್. ಪೂಜಾರಿ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್ ಹರವಾಳ, ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವೈ. ಸೋಮಶೇಖರ್, ಕರ್ನಾಟಕ ಪ್ರದೇಶ ಕುರುಬ, ಗೊಂಡ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಎಸ್. ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







