ಕಲಬುರಗಿ ಕಸಾಪದಿಂದ ಕನ್ನಡ ಜಾಗೃತಿ ಜಾಥಾ : ಕನ್ನಡ ನಾಮಫಲಕಗಳ ಅಳವಡಿಕೆಗಾಗಿ ಒತ್ತಾಯ

ಕಲಬುರಗಿ : ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ನಗರದ ಅಂಗಡಿ ಮುಂಗಟ್ಟುಗಳ ಮೇಲೆ ನಾಮಫಲಕ ಕನ್ನಡದಲ್ಲಿ ಹಾಕುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ವಿಶೇಷ ಕನ್ನಡ ಜಾಗೃತಿ ಜಾಥಾದ ಮೂಲಕ ಸಾಮಾಜಿಕ ಜಾಗೃತಿ ಯಶಸ್ವಿಗೊಂಡಿತು.
ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿನ ಪಟೇಲ್ ಪುತ್ತಳ್ಳಿಗೆ ಮಾಲಾರ್ಪಣೆ ಸಲ್ಲಿಸಿ ಜಾಥಾಗೆ ಚಾಲನೆ ನೀಡಲಾಯಿತು.
ಹಿರಿಯ ಸಾಹಿತಿಗಳಾದ ಡಾ.ಶ್ರೀಶೈಲ ನಾಗರಾಳ ಹಾಗೂ ಡಾ.ಸದಾನಂದ ಪೆರ್ಲ, ಶರಣ ಚಿಂತಕ ಮಲ್ಲಣ್ಣ ನಾಗರಾಳ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್.ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಸಂದೀಪ ಭರಣಿ, ರಾಜೆಂದ್ರ ಮಾಡಬೂಳ ಸೇರಿದಂತೆ ಅನೇಕರು ವ್ಯಾಪಾರಸ್ಥರಿಗೆ ಕನ್ನಡದ ಬಾವುಟಗಳನ್ನು ನೀಡಿದರು.
ಈ ವೇಳೆ ನೇತೃತ್ವ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಮಾತೃ ಭಾಷೆಯನ್ನು ನಾವೆಲ್ಲರೂ ಪ್ರೀತಿಸಿ ಗೌರವಿಸಬೇಕು. ಆ ಮೂಲಕ ನಡೆ-ನುಡಿಗಳು ನಮ್ಮ ಬದುಕಿನ ಅಸ್ಮಿತೆಯಾಗಬೇಕು. ಕನ್ನಡಮಯಗೊಂಡಾಗ ಉಸಿರು ಹಸಿರಾಗಿ ಭಾಷಾ ಬೆಳವಣಿಗೆ ಗಟ್ಟಿಗೊಳ್ಳುತ್ತದೆ. ಇಂದು ಆಂಗ್ಲ ಭಾಷೆಯ ವ್ಯಾಮೋಹದ ನಡುವೆಯೂ ಕನ್ನಡ ಕಟ್ಟುವ ಕೆಲಸ ಇನ್ನೂ ಮಾಡಬೇಕಾಗಿದೆ. ಕನ್ನಡದ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ರೂಪಿಸುತ್ತಿದೆ ಎಂದರು.
ಡಾ.ಸದಾನಂದ ಪೆರ್ಲ ಹಾಗೂ ಡಾ. ಶ್ರೀಶೈಲ ನಾಗರಾಳ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನೆಲ-ಜಲ ಹಾಗೂ ಭಾಷೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಆಯೋಜಿಸುತ್ತಿದೆ. ರಾಜ್ಯದ ಗಡಿಜಿಲ್ಲೆಗಳಲ್ಲೊಂದಾದ ಕಲಬುರಗಿ ಜಿಲ್ಲೆಯ ಜನತೆಯಲ್ಲಿ ಕನ್ನಡ ಜಾಗೃತಿ ಮೂಡಿಸುವುದು, ಭಾಷಾಭಿಮಾನ ಬೆಳೆಸುವುದು ಹಾಗೂ ಸರಕಾರಿ ಕನ್ನಡ ಶಾಲೆಗಳನ್ನು ಉತ್ತೇಜಿಸಿ, ಪ್ರೋತ್ಸಾಹಿಸುವ ಅಗತ್ಯತೆ ಇದೆ. ಈ ದಿಸೆಯಲ್ಲಿ ರಾಜ್ಯ ಸರಕಾರ ಹಾಗೂ ಪರಿಷತ್ತು ಹೆಚ್ಚು ಮುತುರ್ವಜಿ ವಹಿಸಿ ಕಾರ್ಯ ಮಾಡಬೇಕಾಗಿದೆ. ಇದರಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಈವೇಳೆ ಸರ್ದಾರ್ ವಲ್ಲಭಬಾಯಿ ಪಟೆಲ್ ವೃತ್ತದ ಪ್ರಮುಖ ರಸ್ತೆಗಳ ಬದಿಯಿರುವ ಅಂಗಟಿ ಮುಂಗಟ್ಟುಗಳ ಮಾಲಕರಿಗೆ ಕನ್ನಡ ಭಾಷೆ ಕುರಿತು ಜಾಗೃತಿ ಮೂಡಿಸಲಾಯಿತು.
ಕೇಂದ್ರ ಕಸಾಪ ಪ್ರತಿನಿಧಿ ಸೈಯದ್ ನಝಿರುದ್ದಿನ್ ಮುತ್ತವಲ್ಲಿ, ಎಂ.ಎನ್.ಸುಗಂಧಿ, ಈರಣ್ಣ ಸೋನಾರ, ಸವಿತಾ ಪಾಟೀಲ, ಚಂದ್ರಕಾಂತ ಸೂರನ್, ಜಯಶ್ರೀ ಮುಚಳಂಬಿ, ಬಂಡೆಮ್ಮ ಹಿರೇಮಠ, ಸೋಮಶೇಖರಯ್ಯಾ ಹೊಸಮಠ, ಅಶೋಕ ಗುತ್ತೇದಾರ, ಕಾಶಿನಾಥ ಮಂದೇವಾಲ, ನಂದಿನಿ ಸನ್ಬಾಳ, ಮಂಜುನಾಥ ಬಿರಾದಾರ ಹೊಡೇಬೀರನಳ್ಳಿ, ಮಹಾಲಿಂಗಯ್ಯ ಸ್ವಾಮಿ, ಪ್ರಭವ ಪಟ್ಟಣಕರ್ ಸೇರಿದಂತೆ ಅನೇಕ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.







