ಕನ್ನಡಕ್ಕೆ ಸರ್ವಜ್ಞನಂತೆ ತೆಲುಗಿಗೆ ವೇಮನರು ಮಹಾನ್ ವಚನಕಾರರು : ಶಾಸಕ ಅಲ್ಲಮಪ್ರಭು ಪಾಟೀಲ್

ಕಲಬುರಗಿ: ಕನ್ನಡ ಸಾಹಿತ್ಯಕ್ಕೆ ಸರ್ವಜ್ಞ ಹಾಗೂ ತಮಿಳಿಗೆ ತಿರುವಳ್ಳುವರ್ ಅವರು ನೀಡಿದ ಕೊಡುಗೆಯಂತೆ, ತೆಲುಗು ಸಾಹಿತ್ಯಕ್ಕೆ ಶ್ರೀ ಮಹಾಯೋಗಿ ವೇಮನರು ವಚನಗಳ ಮೂಲಕ ಲೋಕಕಲ್ಯಾಣದ ಹಾದಿ ತೋರಿದ ಮಹಾನ್ ದಾರ್ಶನಿಕರು ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಬಣ್ಣಿಸಿದರು.
ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
14 ಮತ್ತು 15ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ವೇಮನರು, ಆರಂಭದಲ್ಲಿ ಕಾರಣಾಂತರಗಳಿಂದ ದುಶ್ಚಟ ಹಾಗೂ ವ್ಯಾಮೋಹಕ್ಕೆ ಒಳಗಾಗಿದ್ದರು. ಆದರೆ, ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ಅವರ ಪ್ರೇರಣದಾಯಕ ಮಾತುಗಳಿಂದ ಮನ ಪರಿವರ್ತನೆಗೊಂಡು ಯೋಗಿಯಾದರು. ಮುಂದೆ ಸಮಾಜ ಸುಧಾರಣೆಗಾಗಿ ಸುಮಾರು 4,000ಕ್ಕೂ ಹೆಚ್ಚು ವಚನಗಳನ್ನು ರಚಿಸುವ ಮೂಲಕ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕರು ಸ್ಮರಿಸಿದರು.
ಬಸವಣ್ಣನವರ ತತ್ವದ ಹಾದಿಯಲ್ಲಿ ಸಾಗಿದ ವೇಮನರು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಮಹಾನ್ ದಾರ್ಶನಿಕರ ಸಾಧನೆ ಮತ್ತು ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸರ್ಕಾರವು ಶಾಲಾ ಪಠ್ಯ ಪುಸ್ತಕಗಳಲ್ಲಿ ಇವರ ಜೀವನ ಚರಿತ್ರೆಯನ್ನು ಅಳವಡಿಸಬೇಕು ಎಂದು ಶಾಸಕರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರೆಡ್ಡಿ ಸಮಾಜದ ಅಧ್ಯಕ್ಷರಾದ ಡಾ. ಎಸ್. ಬಿ. ಕಾಮರೆಡ್ಡಿ ಮಾತನಾಡಿದರು. ಕಲಬುರಗಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತಿ ಎಂ. ರೆಡ್ಡಿ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ, ಜಿಲ್ಲಾಧಿಕಾರಿ ಕಚೇರಿಯ ಕಚೇರಿ ಸಹಾಯಕ ಶಿವಪ್ರಭು ಹಿರೇಮಠ, ಹಾಗೂ ರೆಡ್ಡಿ ಸಮಾಜದ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಸ್ವಾಗತಿಸಿದರು.







