ಸವಾಲುಗಳನ್ನು ಮೆಟ್ಟಿ ನಿಲ್ಲುವ ಭಾಷೆ ಕನ್ನಡ: ನಾಡೋಜ ಬರಗೂರು ರಾಮಚಂದ್ರಪ್ಪ

ಹೈದರಾಬಾದ್/ ಕಲಬುರಗಿ: ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ “ಒಳನಾಡು–ಹೊರನಾಡು : ಕನ್ನಡ ಸ್ಥಿತಿಗತಿ" ವಿಷಯದ ಕುರಿತು ವಿಶೇಷಗೋಷ್ಠಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ನಾಡೋಜ ಬರಗೂರು ರಾಮಚಂದ್ರಪ್ಪ ಅವರು, ಕನ್ನಡಕ್ಕೆ ಸಾವಿರಾರು ವರ್ಷಗಳ ಚರಿತ್ರೆಯಿರುವಂತೆ ಅನೇಕ ಸವಾಲುಗಳೂ ಇವೆ. ಆದರೆ ಅಂತಃಶಕ್ತಿಯಿಂದ ಕೂಡಿದ ಭಾಷೆಯಾಗಿರುವ ಕಾರಣ ಎಲ್ಲ ಸವಾಲುಗಳನ್ನು ಮೆಟ್ಟಿ ಆಧುನಿಕವಾಗಿ ಅದು ಜೀವಂತವಾಗಿ ಉಳಿದಿದೆ. ಕಾಲಕ್ಕೆ ತಕ್ಕಂತೆ ತೆರೆದುಕೊಂಡು ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ಹೇಳಿದರು.
ಕರ್ನಾಟಕದ ಒಳನಾಡಿನಲ್ಲಿರುವ ಕನ್ನಡಿಗರ ಸ್ಥಿತಿಗತಿ ಹಾಗೂ ಕರ್ನಾಟಕದ ಹೊರನಾಡಿನಲ್ಲಿರುವ ಕನ್ನಡಿಗರ ಬದುಕಿನ ಸ್ಥಿತಿಗತಿಗಳ ನಡುವೆ ಮಹತ್ತರ ಅಜಗಜಾಂತರ ವ್ಯತ್ಯಾಸಗಳಿವೆ. ಅವರ ಅಡ್ಡಿ–ಆತಂಕಗಳೂ ವಿಭಿನ್ನವಾಗಿವೆ. ಆದ್ದರಿಂದ ಒಂದೇ ಸರಳ ರೇಖೆಯಲ್ಲಿ ಇವರ ಜೀವನ ವಿಧಾನವನ್ನು ಕನ್ನಡದ ಸಂದರ್ಭದಲ್ಲಿ ವಿವರಿಸುವುದು ಕಷ್ಟಕರವೆಂದು ಅಭಿಪ್ರಾಯಪಟ್ಟರು.
ಭಾರತದ ಇತರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಭಾಷಾ ಸಂಬಂಧಿತ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರುವುದು ಸಂತಸದ ಸಂಗತಿ. ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಸಂವರ್ಧನೆಗಾಗಿ ಸರ್ಕಾರವೇ ಅನೇಕ ಪ್ರಾಧಿಕಾರಗಳು, ಅಕಾಡೆಮಿಗಳು, ಪ್ರತಿಷ್ಠಾನಗಳು, ಟ್ರಸ್ಟ್‌ಗಳನ್ನು ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಒಳನಾಡಿನಲ್ಲಿ ಕನ್ನಡ ಸಾಯುತ್ತದೆ ಎಂಬ ಮಾತನ್ನು ನಾನು ನಿರಾಕರಿಸುತ್ತೇನೆ. ಕನ್ನಡ ತನ್ನ ಅಂತಃಶಕ್ತಿಯಿಂದಲೇ ಎಲ್ಲ ಸವಾಲುಗಳನ್ನು ಎದುರಿಸಿ ಕಾಲಕ್ಕೆ ತಕ್ಕಂತೆ ಸಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಕಲಾ ವಿಭಾಗದ ಪ್ರಾಂಶುಪಾಲರಾದ ಪ್ರೊ.ಸಿ.ಕಾಶಿಂ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ತಂತ್ರಜ್ಞಾನದಿಂದಾಗಿ ಎದುರುಬದುರು ಕುಳಿತರೂ ಮಾತನಾಡಲಾರದ ಸ್ಥಿತಿಗೆ ನಾವು ತಲುಪಿದ್ದೇವೆ. ಇಂತಹ ಸಂದರ್ಭದಲ್ಲಿ ಭಾಷೆ ನಮ್ಮ ಬದುಕನ್ನು ಹೇಗೆ ರೂಪಿಸಿದೆ ಎಂಬುದರ ಕುರಿತು ಆತ್ಮಾವಲೋಕನ ಅಗತ್ಯವಿದೆ ಎಂದರು.
ಡಾ. ಶಾಂತಾದೇವಿ ಸಣ್ಣೆಲಪ್ಪನವರ ಅವರು ಮೂಲತಃ ಕನ್ನಡದಲ್ಲಿ ರಚಿಸಿರುವ ಕೃತಿಯನ್ನು ಶ್ರೀರಾಮ ಕೃಷ್ಣಮೂರ್ತಿ ಅವರು “ನ ಹಿ ಯೋಗೇನ ಸದೃಶ್ಯಂ” ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ಅನುವಾದ ಗೊಳಿಸಿದ್ದಾರೆ. ಸದರಿ ಕೃತಿಯನ್ನು ಉಸ್ಮಾನಿಯಾ ವಿಶ್ವವಿದ್ಯಾಲಯದ ತೆಲುಗು ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್. ಕಮಲಾಕರ ಶರ್ಮಾ ಅವರು ಪರಿಚಯಿಸಿದರು.
ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಲಿಂಗಪ್ಪ ಗೋನಾಲ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. “ಒಳನಾಡು–ಹೊರನಾಡು ಕನ್ನಡದ ಸ್ಥಿತಿಗತಿ” ವಿಷಯದ ಸಂವಾದದಲ್ಲಿ ಪ್ರೊ.ನಿಖಿಲ ಹೆಚ್.ಎಸ್., ಸುಧೀಂದ್ರ ಕುಲಕರ್ಣಿ, ಸುರೇಂದ್ರ ಕಟಗೇರಿ, ಧರ್ಮೇಂದ್ರ ಪೂಜಾರಿ, ಸುಮತಿ ನಿರಂಜನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ಭವಿಷ್ಯದಲ್ಲಿ ಹೈದರಾಬಾದಿನ ಕನ್ನಡಿಗರು ಹಮ್ಮಿಕೊಳ್ಳುವ ಯಾವುದೇ ಸಾಹಿತ್ಯದ ಚಟುವಟಿಕೆಗಳಿಗೆ, ಕರ್ನಾಟಕ ಸರಕಾರದ ಹಣಕಾಸಿನ ನೆರವಿಗೆ ಕಾಯದೆ ನನಗೆ ಮಾಹಿತಿ ಕೊಟ್ಟಲ್ಲಿ, ಇಲ್ಲಿ ನಾ ಭೂತೋ ನಾ ಭವಿಷ್ಯತ್ ಎಂಬಂತೆ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹೈದರಾಬಾದ್ ಕರ್ನಾಟಕದ ಮೊದಲ ಎಂ.ಎ. ಕನ್ನಡ ಪದವೀಧರರೂ ಹಾಗೂ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಸ್ಥಾಪಕ ಮುಖ್ಯಸ್ಥರಾಗಿದ್ದ ಪ್ರೊ.ಡಿ.ಕೆ.ಭೀಮಸೇನರಾವ್ ಅವರ ಪುತ್ರ ಡಿ.ಬಿ.ರಾಘವೇಂದ್ರರಾವ್, ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದ ಉಪಾಧ್ಯಕ್ಷರಾದ ರಾಘವೇಂದ್ರ ದೇಸಾಯಿ ಸೇರಿದಂತೆ ಹೈದರಾಬಾದಿನ ಅನೇಕ ಕನ್ನಡಾಭಿಮಾನಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







