ಕರ್ಮ ನಮ್ಮ ಚಿಂತನೆಗಳಿಂದಲೇ ಆರಂಭವಾಗುತ್ತದೆ: ಭಂತೆ ಮಂಗಲ

ವಾಡಿ: ಬೌದ್ಧ ಧರ್ಮದಲ್ಲಿ ಕರ್ಮ ಸಿದ್ಧಾಂತಕ್ಕೆ ಮಹತ್ವದ ಸ್ಥಾನವಿದೆ. ಕರ್ಮವು ನಮ್ಮ ಆಲೋಚನೆ ಹಾಗೂ ಚಿಂತನೆಗಳಿಂದಲೇ ಆರಂಭವಾಗುತ್ತದೆ. ನಮ್ಮ ಮನಸ್ಸಿನಲ್ಲಿರುವ ಉದ್ದೇಶಗಳು, ಆಲೋಚನೆಗಳು ಮತ್ತು ಅವುಗಳಿಗೆ ಅನುಗುಣವಾಗಿ ಮಾಡುವ ಕಾರ್ಯಗಳು ನಮ್ಮ ಕರ್ಮವನ್ನು ನಿರ್ಧರಿಸುತ್ತವೆ ಎಂದು ಥೈಲ್ಯಾಂಡ್‌ನ ಪೂಜ್ಯ ಭಂತೆ ಮಂಗಲ ಹೇಳಿದರು.
ಪಟ್ಟಣದ ಸಿದ್ಧಾರ್ಥ ವಿಹಾರದಲ್ಲಿ ರವಿವಾರ ಚಾರಿಕಾ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಧಮ್ಮ ದೇಸನದಲ್ಲಿ ಅವರು ಮಾತನಾಡಿದರು.
ಮನುಷ್ಯನು ಮಾಡುವ ಪ್ರತಿಯೊಂದು ದೈಹಿಕ, ವಾಚಿಕ ಮತ್ತು ಮಾನಸಿಕ ಕ್ರಿಯೆಯೂ ಕರ್ಮದ ವ್ಯಾಪ್ತಿಗೆ ಬರುತ್ತದೆ. ದಯೆ, ಕರುಣೆ ಹಾಗೂ ದಾನದಂತಹ ಸತ್ಕಾರ್ಯಗಳು ಉತ್ತಮ ಕರ್ಮಗಳಾಗಿದ್ದರೆ, ಆಸೆ, ಕ್ರೋಧ, ಲೋಭ ಮತ್ತು ಅಜ್ಞಾನದಿಂದ ಪ್ರೇರಿತವಾದ ಕಾರ್ಯಗಳು ಕೆಟ್ಟ ಕರ್ಮಗಳಾಗುತ್ತವೆ. ಆದ್ದರಿಂದ ಮನುಷ್ಯ ತನ್ನ ಆಲೋಚನೆಗಳನ್ನು ಶುದ್ಧವಾಗಿಟ್ಟುಕೊಂಡು, ಸದಾಚಾರದಿಂದ ಬದುಕಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಭೂಮಿಯ ಮೇಲೆ ಜನಿಸಿದ ಜೀವಿಗಳಲ್ಲಿ ಮನುಷ್ಯನಿಗೆ ವಿಶೇಷ ಸ್ಥಾನವಿದೆ. ತನ್ನ ತಪ್ಪುಗಳನ್ನು ಅರಿತು ತಿದ್ದಿಕೊಳ್ಳುವ ಹಾಗೂ ವಿವೇಕದಿಂದ ನಡೆದುಕೊಳ್ಳುವ ಪ್ರಜ್ಞೆ ಮನುಷ್ಯನಿಗಿದೆ. ಹೀಗಾಗಿ ಮನುಷ್ಯರ ನಡುವಿನ ಭೇದಭಾವಗಳನ್ನು ತೊಡೆದುಹಾಕಿ, ಪರಸ್ಪರ ಪ್ರೀತಿ, ಗೌರವ ಮತ್ತು ಸಮಾನತೆಯಿಂದ ಬದುಕಬೇಕು. ಜಗತ್ತಿಗೆ ಯುದ್ಧದ ಬದಲಾಗಿ ಬುದ್ಧನ ಶಾಂತಿ, ಕರುಣೆ ಮತ್ತು ಅಹಿಂಸೆಯ ಸಂದೇಶದ ಅಗತ್ಯವಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಕರೆ ನೀಡಿದರು.
ಪೂಜ್ಯ ಭಂತೆ ಸುಮೇಧೋ ಮಾತನಾಡಿ, ವಿವಿಧ ಸಂಪ್ರದಾಯಗಳ ಪ್ರಭಾವದಿಂದ ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಬೌದ್ಧ ಧಮ್ಮಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಆಳವಾದ ಅಧ್ಯಯನದ ಮೂಲಕ ಹೊಸ ಸಾಮಾಜಿಕ ದೃಷ್ಟಿಕೋನ ನೀಡಿದರು. ಬೌದ್ಧ ಧಮ್ಮವನ್ನು ಪುನರ್‌ವ್ಯಾಖ್ಯಾನಿಸುವುದರ ಜತೆಗೆ ಅದರ ಮೂಲ ಸಿದ್ಧಾಂತಗಳಿಗೆ ಹೊಸ ಸ್ಪರ್ಶ ನೀಡಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಬೋಡಿಯಾದ ಪೂಜ್ಯ ಭಂತೆ ಕಂತಿಕೋ, ಭಂತೆ ಸಾಗರ ಮೇಧಿ, ಭಂತೆ ಆರ್ಯವಂಶಿ, ಭಂತೆ ಧಮ್ಮರಕ್ಖಿತ ಹಾಗೂ ಭಂತೆ ಒಬಾಸ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಸದಸ್ಯ ಸೂರ್ಯಕಾಂತ ರದ್ದೇವಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಬೌದ್ಧ ಉಪಾಸಕರಾದ ಸಂತೋಷ ಜೋಗೂರ, ಭೀಮಾ ನಾಟೇಕರ, ದಯಾನಂದ ಖಜೂರಿ, ರವಿ ಕೋಳಕೂರ, ಲಕ್ಷ್ಮೀಕಾಂತ ಕೋಬಾಳಕರ, ಬಾಬು ಕಾಂಬಳೆ, ಮರಲಿಂಗ ಮಾಲಗತ್ತಿ, ಕಿರಣ ರಾಜನಾಳ, ಪ್ರಭು ಸಿರೂರಕರ, ಭೀಮಶಾ ಮೈನಾಳಕರ, ಆನಂದಕುಮಾರ ನಿಂಬರ್ಗಾ, ವಿಜಯ ಸಿಂಗೆ, ಭೀಮರಾವ ಕಾನಳ್ಳಿ, ವಿಶಾಲ ಬಡಿಗೇರ, ಶ್ರೀಕಾಂತ ಕೇತನಕರ, ನಿಂಗಣ್ಣ ಶಾರದಳ್ಳಿ, ನಾರಾಯಣ, ಹಣಮೇಶ ಯಮನಾಳ, ಮಲಿಕ್ ಬಟ್ಟರ್ಕಿ, ಯಶವಂತ ಧನ್ನೇಕರ, ಪರಶುರಾಮ ಬನಸೀಡೆ, ಕಿಟ್ಟು ಬಟ್ಟರ್ಕಿ ಸೇರಿದಂತೆ ಹಲವರು ಭಾಗವಹಿಸಿದ್ದರು.






