ಕಲಬುರಗಿ: ‘ಖೇತ್ ಬಚಾವ್’ ಕೃಷಿ ಜಾಗೃತಿ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವತಿಯಿಂದ ದೇಶಾದ್ಯಂತ ಹಮ್ಮಿಕೊಂಡಿರುವ ‘ಖೇತ್ ಬಚಾವ್’ ಕೃಷಿ ಜಾಗೃತಿ ಅಭಿಯಾನದ ಅಂಗವಾಗಿ ಕಲಬುರಗಿಯಲ್ಲಿ ರೈತರಿಗೆ ರಾಸಾಯನಿಕ ಗೊಬ್ಬರಗಳ ಮಿತ ಬಳಕೆ ಹಾಗೂ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ರಾಜು ಜಿ. ತೆಗ್ಗಳ್ಳಿ ಉದ್ಘಾಟಿಸಿ ಮಾತನಾಡಿದರು. ಮಣ್ಣಿನ ಆರೋಗ್ಯ ಕಾಪಾಡುವುದು, ನೀರಿನ ಸಂರಕ್ಷಣೆ, ಪರಿಸರ ಸ್ನೇಹಿ ಕೃಷಿ ಪದ್ಧತಿಗಳ ಅನುಸರಣೆ ಹಾಗೂ ರಾಸಾಯನಿಕ ಗೊಬ್ಬರಗಳ ಸಮರ್ಪಕ ಬಳಕೆ ಇಂದಿನ ಕೃಷಿಯಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಆಟರಿ ಬೆಂಗಳೂರು, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ ಕಲಬುರಗಿ ಹಾಗೂ ಕೃಷಿ ಇಲಾಖೆ ಕಲಬುರಗಿ ಸಂಯುಕ್ತವಾಗಿ ಆಯೋಜಿಸಿದ್ದು, ಜೂನ್ ತಿಂಗಳ ಪೂರ್ತಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ರೈತರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಜ್ಞರಾದ ಡಾ. ಯೂಸುಫ್ ಅಲಿ ಎನ್., ಡಾ. ಜಹೀರ್ ಅಹಮದ್ ಹಾಗೂ ಡಾ. ಶ್ರೀನಿವಾಸ್ ಬಿ.ವಿ. ಅವರು ರೈತರಿಗೆ ನೀರು ಮತ್ತು ಮಣ್ಣಿನ ಸಂರಕ್ಷಣೆ, ಸುರಕ್ಷಿತ ಕೀಟ ನಿರ್ವಹಣೆ, ರಾಸಾಯನಿಕ ಗೊಬ್ಬರಗಳ ಮಿತ ಬಳಕೆ, ಹಸಿರೆಲೆ ಗೊಬ್ಬರ, ಎರೆಗೊಬ್ಬರ ಹಾಗೂ ಕಂಪೋಸ್ಟ್ ಬಳಕೆ, ಕಳೆನಾಶಕ ಮತ್ತು ರೋಗನಾಶಕಗಳ ವೈಜ್ಞಾನಿಕ ಬಳಕೆ ಕುರಿತು ವಿವರವಾದ ಮಾಹಿತಿ ನೀಡಿದರು.
ಉತ್ತಮ ಇಳುವರಿ ಹಾಗೂ ದೀರ್ಘಕಾಲಿಕ ಕೃಷಿ ಅಭಿವೃದ್ಧಿಗಾಗಿ ಪರಿಸರ ಸ್ನೇಹಿ ಬೇಸಾಯ ಕ್ರಮಗಳಿಗೆ ಆದ್ಯತೆ ನೀಡಬೇಕು. ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಇಲಾಖೆಯ ಕೇಂದ್ರಗಳಲ್ಲಿ ದೊರೆಯುವ ಬೀಜಗಳನ್ನು ಬಿತ್ತನೆಗೂ ಮುನ್ನ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ನಡೆಸುವಂತೆ ರೈತರಿಗೆ ಸಲಹೆ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರು ಇದ್ದರು.






