ಭಾರತೀಯ ಸಂಸ್ಕೃತಿ ಉತ್ಸವ ಖಂಡಿಸಿ ಜ.27ರಂದು 'ಕೋಮುವಾದದ ಭೂತ ದಹನ' ಕಾರ್ಯಕ್ರಮ: ಅರ್ಜುನ್ ಭದ್ರೆ

ಕಲಬುರಗಿ: ಸೇಡಂ ಹೊರ ವಲಯದ ಬೀರನಹಳ್ಳಿ ಕ್ರಾಸ್‌ನಲ್ಲಿ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವು ಸಂಘ ಪರಿವಾರದ ಕಾರ್ಯಕ್ರಮವಾಗಿದ್ದು, ಎಕಸಂಸ್ಕೃತಿಯನ್ನು ಬಲಗೊಳಿಸುವ ಕಾರ್ಯಕ್ರಮವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರ್.ಎಸ್.ಎಸ್. ಮತ್ತು ಸಂಘ ಪರಿಹಾರ ಡಾ.ಬಿ.ಆರ್. ಅಂಬೇಡ್ಕರವರ ಸಂವಿಧಾನವನ್ನು ಬದಲಿಸುವ ಹುನ್ನಾರ ನಡೆಸುತ್ತಿವೆ. ಈ ಉತ್ಸವ ವಿರೋಧಿಸಿ, ಕರ್ನಾಟಕ ರಾಜ್ಯ ದಲಿತ ಸಮಿತಿ ಕ್ರಾಂತಿಕಾರಿ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಮಿತಿಯಿಂದ ಜ.27 ರಂದು ಮಧ್ಯಾಹ್ನ 12:30ಕ್ಕೆ ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ 'ಕಲ್ಯಾಣ ಕರ್ನಾಟಕದಲ್ಲಿ ನಾಗಪುರದ ನಾಝಿ ವಿಷ ಸರ್ಪಗಳು ಬರುತ್ತಿವೆ ಎಚ್ಚರ! ಕೋಮುವಾದದ ಭೂತ ದಹನ'ಎಂಬ ಘೋಷ್ಯ ವಾಕ್ಯದಡಿಯಲ್ಲಿ ಬಹೃತ್ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ಕಲಬುರಗಿ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಸಿದ್ದಮ್ಮ ಇಟಗಿಕರ್ ಮೆರವಣಿಗೆಗೆ ಚಾಲನೆ ನೀಡುವರು. ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖನ್ನಾ, ಮಲ್ಲಿಕಾರ್ಜುನ ಕ್ರಾಂತಿ, ಸೂರ್ಯಕಾಂತ ಅಜಾದಪೂರ, ಬಸವರಾಜ ಪಾಸ್ವಾನ್ ಸೇರಿದಂತೆ ಮತ್ತಿತರರು ಇದ್ದರು.





