ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಕಲಬುರಗಿ ನಗರ ಸೇರಿದಂತೆ ಜಿಲ್ಲಾದ್ಯಂತ ದೀಪ ಆರಿಸಿ ಪ್ರತಿಭಟನೆ

ಕಲಬುರಗಿ : ನಗರದ ಹಲವು ಬಡಾವಣೆಗಳಲ್ಲಿ ಬುಧವಾರ ರಾತ್ರಿ 9 ಗಂಟೆಯಿಂದ 9.15 ರವರೆಗೆ ಮನೆಯಲ್ಲಿನ ವಿದ್ಯುತ್ ದೀಪ ಆರಿಸುವುದರ ಮೂಲಕ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿ ಮುಸ್ಲಿಂ ಸಮುದಾಯದವರಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಇಂದು ರಾತ್ರಿ ಏಕಕಾಲಕ್ಕೆ ಮನೆಯಲ್ಲಿ 'ಬತ್ತಿ ಗುಲ್' ಎಂಬ ಹೆಸರಿನಲ್ಲಿ ಲೈಟ್ ಅನ್ನು ಆರಿಸಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಭಟನೆ ನಡೆಸಿ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆ ನೀಡಿತ್ತು.
ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೀಡಿದ ಕರೆಯ ಮೇರೆಗೆ ನಗರದ ಹಗಾರಗಾ ಕ್ರಾಸ್, ಮುಸ್ಲಿಂ ಚೌಕ್, ಜಾಫರಾಬಾದ್, ಮಿಜಗುರಿ, ಮದೀನಾ ಕಾಲೋನಿ, ಮಿಲ್ಖಾ ಕಾಲೋನಿ, ಮಹೇಬೂಬ್ ನಗರ, ಟಿಪ್ಪು ಸುಲ್ತಾನ್ ಚೌಕ್ ಸೇರಿದಂತೆ ಹಲವು ಕಡೆಗಳಲ್ಲಿ 15 ನಿಮಿಷಗಳ ಕಾಲ ಲೈಟ್ ಅನ್ನು ಆರಿಸುವುದರ ಮೂಲಕ ವಕ್ಫ್ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಕೆಲವು ಬಡಾವಣೆಗಳಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ವಕ್ಫ್ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ, ವಕ್ಫ್ ವಿರುದ್ಧ ಬರೆದಿರುವ ಪೋಸ್ಟರ್ ಗಳನ್ನು ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.







