ಆಳಂದ | ಅಂಚೆ ಕಚೇರಿ ಖಜಾನೆ ದೋಚಲು ಯತ್ನ

ಆಳಂದ: ಪಟ್ಟಣದ ಅಂಚೆ ಕಚೇರಿ ಹಾಗೂ ಎಪಿಎಂಸಿ ಆಡಳಿತ ಕಚೇರಿಗೆ ಮಧ್ಯರಾತ್ರಿ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು, ಅಂಚೆ ಕಚೇರಿಯಲ್ಲಿದ್ದ 5 ಲಕ್ಷ ರೂ. ಗೂ ಅಧಿಕ ನಗದು ಹಣ ಅದೃಷ್ಟವಶಾತ್ ಸುರಕ್ಷಿತವಾಗಿ ಉಳಿದಿದೆ.
ಪಟ್ಟಣದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಎಪಿಎಂಸಿ ಮಳಿಗೆಗಳ ಮೇಲಂತಸ್ತಿನಲ್ಲಿರುವ ಎಪಿಎಂಸಿ ಆಡಳಿತ ಕಚೇರಿ ಹಾಗೂ ಅಂಚೆ ಕಚೇರಿಯ ಹಿಂದಿನ ಭಾಗದಿಂದ ಒಳನುಗ್ಗಿದ ದುಷ್ಕರ್ಮಿಗಳು ಬಾಗಿಲಿನ ಬೀಗ ಮುರಿದು ಕಚೇರಿಯೊಳಗೆ ಪ್ರವೇಶಿಸಿದ್ದಾರೆ. ಬಳಿಕ ಅಂಚೆ ಕಚೇರಿಯಲ್ಲಿದ್ದ ಖಜಾನೆ ಟ್ರಜರಿಯನ್ನು ಗುರಿಯಾಗಿಸಿಕೊಂಡು ಅದರಲ್ಲಿದ್ದ ಹಣವನ್ನು ದೋಚಲು ಯತ್ನಿಸಿದ್ದಾರೆ.
ಕಳ್ಳರು ಟ್ರಜರಿಯನ್ನು ಕಚೇರಿಯ ಒಳಭಾಗದಿಂದ ಹೊರಗೆ ಎಳೆದು ತಂದಿದ್ದರೂ, ಅದರ ಭಾರದಿಂದಾಗಿ ಅದನ್ನು ಹೊತ್ತುಕೊಂಡು ಹೋಗಲು ಸಾಧ್ಯವಾಗದೆ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪರಿಣಾಮ ಟ್ರಜರಿಯಲ್ಲಿದ್ದ 5 ಲಕ್ಷಕ್ಕೂ ಅಧಿಕ ಹಣ ಕಳ್ಳರ ಕೈ ಸೇರದೆ ಸುರಕ್ಷಿತವಾಗಿ ಉಳಿದಿದೆ ಎಂದು ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ತಿಳಿಸಿದ್ದಾರೆ.
ಕಳ್ಳರು ಕಚೇರಿಯೊಳಗಿನ ದಾಖಲೆಗಳು ಹಾಗೂ ವಸ್ತುಗಳನ್ನು ಹುಡುಕಾಡಿದ ಪರಿಣಾಮ ದಾಖಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಇದೇ ವೇಳೆ ಎಪಿಎಂಸಿ ಆಡಳಿತ ಕಚೇರಿಗೂ ನುಗ್ಗಿದ ದುಷ್ಕರ್ಮಿಗಳು ಅಲ್ಲಿನ ಬಾಗಿಲು ಮುರಿದು ದಾಖಲೆಗಳನ್ನು ಅಸ್ತವ್ಯಸ್ತಗೊಳಿಸಿದ್ದಾರೆ. ಆದರೆ ಯಾವುದೇ ನಗದು ಅಥವಾ ಪ್ರಮುಖ ವಸ್ತು ಕಳುವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಆಳಂದ ಪೊಲೀಸ್ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳರು ಯಾವ ಮಾರ್ಗದ ಮೂಲಕ ಪ್ರವೇಶಿಸಿದ್ದಾರೆ ಹಾಗೂ ಅವರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.






