ಬೆಳೆ ವಿಮೆ ವಿತರಣೆಯಲ್ಲಿ ಲೋಪ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಾಸಕ ಬಿ.ಆರ್.ಪಾಟೀಲ್ ಆಗ್ರಹ

ಕಲಬುರಗಿ : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಬೆಳೆ ವಿಮೆ ಹಣ ವಿತರಣೆಯಲ್ಲಿ ಹಲವು ಲೋಪದೋಷಗಳು ಕಂಡುಬಂದಿದ್ದು, ಅಧಿಕಾರಿಗಳು ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಳಂದ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳಂದ ತಾಲೂಕಿನಲ್ಲಿ ಕೇವಲ ಮೂರು ಮಂದಿ ಕೃಷಿ ಅಧಿಕಾರಿಗಳಿದ್ದು, ಇಷ್ಟು ದೊಡ್ಡ ತಾಲೂಕಿಗೆ ಇದು ಸಾಕಾಗುವುದಿಲ್ಲ. ಅಧಿಕಾರಿಗಳ ಕೊರತೆಯಿಂದ ರೈತರಿಗೆ ಸಮರ್ಪಕ ಸೇವೆ ದೊರೆಯುತ್ತಿಲ್ಲ ಎಂದು ಹೇಳಿದರು.
ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಕೆಲಸ ಮಾಡದಿರುವ ಕಾರಣ ಅನೇಕ ರೈತರಿಗೆ ಬೆಳೆ ವಿಮೆ ಹಣ ಬಂದಿಲ್ಲ. ಆದರೆ, ಅವರ ತಪ್ಪನ್ನು ತಹಸೀಲ್ದಾರ್ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ಗ್ರಾಮಸಭೆಗಳನ್ನು ನಡೆಸಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಆಳಂದ ತಾಲೂಕಿನಲ್ಲಿ ರೈತರು ಬೆಳೆ ವಿಮೆಯ ಬಗ್ಗೆ ಜಾಗೃತರಾಗಿದ್ದು, ಸ್ವಯಂಪ್ರೇರಣೆಯಿಂದ ವಿಮೆ ಪಾವತಿಸುತ್ತಾರೆ. ಈ ವರ್ಷ ಹಲವರು ಸಾಲ ಪಡೆದು ಬೀಜ ಖರೀದಿಸಿ ಬಿತ್ತನೆ ಮಾಡಿದ್ದು, ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸಕಾಲಕ್ಕೆ ವಿಮೆ ಹಣ ಸಿಗದಿರುವುದು ಆತಂಕಕಾರಿ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಮತ್ತು ವಿಮಾ ಕಂಪನಿಗಳ ನಡುವೆ ಮಧ್ಯವರ್ತಿಗಳು ತೊಂದರೆ ಉಂಟುಮಾಡುತ್ತಿದ್ದರೆ, ಅವರ ವಿರುದ್ಧ ಜಿಲ್ಲಾಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿಮಾ ಕಂಪನಿಗಳು ಕೆಳಮಟ್ಟದ ಅಧಿಕಾರಿಗಳಿಗೆ ಐಫೋನ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಿದ್ದರೂ, ಕೆಲವು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಸುಮಾರು 300 ಕೋಟಿ ರೂ. ವಿಮೆ ಮಂಜೂರಾಗಿದ್ದರೂ, ಸಂಪೂರ್ಣ ಮೊತ್ತ ರೈತರಿಗೆ ತಲುಪಿಲ್ಲ ಎಂದು ಅವರು ಹೇಳಿದರು.
ತಾಲೂಕಿನ ಹಡಲಗಿ ಗ್ರಾಮದಲ್ಲಿ ಬೆಳೆ ವಿಮೆ ಕ್ಲೇಮ್ ಆಗಿದ್ದರೆ, ಯಳಸಂಗಿ ಗ್ರಾಮದಲ್ಲಿ ಕ್ಲೇಮ್ ಆಗಿಲ್ಲ. ಒಂದೇ ರೀತಿಯ ಪರಿಸ್ಥಿತಿಯಲ್ಲಿರುವ ಗ್ರಾಮಗಳಲ್ಲಿ ವಿಮೆ ವಿತರಣೆಯಲ್ಲಿ ವ್ಯತ್ಯಾಸ ಏಕೆ ಉಂಟಾಗಿದೆ ಎಂಬುದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ವಿಮಾ ವಿತರಣೆಯಲ್ಲಿನ ಲೋಪದೋಷಗಳ ಕುರಿತು ಜಿಲ್ಲಾಧಿಕಾರಿಗಳು ಪುನರ್ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದರೂ, ಗ್ರಾಮ ಲೆಕ್ಕಾಧಿಕಾರಿಗಳನ್ನು ರಕ್ಷಿಸಲು ತಹಸೀಲ್ದಾರ್ ಮುಂದಾಗಿರುವ ಆರೋಪಗಳಿದ್ದು, ಇದರಿಂದ ಅಂತಿಮವಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಕಳೆದ 30 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಕೃಷಿ ಅಧಿಕಾರಿಗಳ ನೇಮಕಾತಿ ನಡೆದಿಲ್ಲ. ಇದರ ಪರಿಣಾಮ ಇಲಾಖೆಯ ಕಾರ್ಯನಿರ್ವಹಣೆಯ ಮೇಲೂ ಬಿದ್ದಿದೆ ಎಂದು ಶಾಸಕ ಬಿ.ಆರ್. ಪಾಟೀಲ್ ತಿಳಿಸಿದರು.
ಇ.ಡಿ. ದಾಳಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅಜಿತ್ ಪವಾರ್ ಸ್ವಂತ ಪಕ್ಷದಲ್ಲಿದ್ದಾಗ ಅಪರಾಧಿ, ಬಿಜೆಪಿಗೆ ಸೇರಿದಾಗ ನಿರಪರಾಧಿ ಎಂಬಂತಾಗಿದೆ” ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ತಾವು ಅತಿಥಿಯಂತೆ ಇದ್ದು, ಪಕ್ಷದ ಒಳಗಿನ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ ಎಂದರು.
ಮುಖಂಡ ವೈಜನಾಥ ಝಳಕಿ ಮಾತನಾಡಿ, ಬೆಳೆ ವಿಮೆ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೃಷಿ ಪದವೀಧರರನ್ನು ನೇಮಿಸಬೇಕು. ಕೆಲವೆಡೆ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿರುವ ಸಿಬ್ಬಂದಿಯನ್ನು ಬಳಸಲಾಗುತ್ತಿದ್ದು, ಅವರಿಗೆ ಸೂಕ್ತ ತರಬೇತಿ ಇಲ್ಲದ ಕಾರಣ ರೈತರಿಗೆ ದೊರೆಯಬೇಕಾದ ವಿಮೆ ಹಣ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಆರೋಪಿಸಿದರು.






