ಅಧಿಕಾರಿಗಳ ಬದಲಾವಣೆಯಿಂದ ಜೈಲಿನಲ್ಲಿ ಲೋಪ: ಡಿಜಿಪಿ ಅಲೋಕ್ ಕುಮಾರ್

ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲಿನಲ್ಲಿ ಅಧಿಕಾರಿಗಳ ಪದೇಪದೇ ಬದಲಾವಣೆಯಾಗಿರುವುದು ಆಡಳಿತಾತ್ಮಕ ಲೋಪಕ್ಕೆ ಕಾರಣವಾಗಿದೆ ಎಂದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕಕುಮಾರ್ ತಿಳಿಸಿದ್ದಾರೆ.
ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭೇಟಿಯಾದ ಬಳಿಕ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೇಂದ್ರ ಕಾರಾಗೃಹದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅಧಿಕಾರಿಗಳ ಬದಲಾವಣೆ ನಿರಂತರವಾಗಿ ನಡೆದಿದೆ. ಈ ಹಿಂದೆ ಜೈಲು ಅಧೀಕ್ಷಕರಾಗಿದ್ದ ಅನಿತಾ ಅವರು ವರ್ಗಾವಣೆಗೊಂಡರು. ಬಳಿಕ ಸುರೇಶ್ ಅವರು ಬೆಂಗಳೂರಿನಿಂದ ಕಲಬುರಗಿಗೆ ಬರಲು ಇಚ್ಛಿಸದ ಕಾರಣ ಅವರ ಸ್ಥಾನಕ್ಕೆ ರಾಕೇಶ್ ಕಾಂಬಳೆ ಅವರನ್ನು ನೇಮಿಸಲಾಗಿತ್ತು. ಆದರೆ, ಪರಾರಿ ಪ್ರಕರಣದ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಖಾಯಂ ಅಧಿಕಾರಿಗಳ ಕೊರತೆಯೂ ಈ ಘಟನೆಯ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ" ಎಂದು ಹೇಳಿದರು.
ಪರಾರಿಯಾಗಿದ್ದ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದ್ದು, ಮೂರನೇ ಆರೋಪಿಯಾದ ಮಸ್ತಾನ್‌ನ ಬಂಧನಕ್ಕಾಗಿ ಕಲಬುರಗಿ ಹಾಗೂ ಬೀದರ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆತನನ್ನು ಬಂಧಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಘಟನೆಯ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಜೈಲಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ರಾತ್ರಿ ವೇಳೆಯಲ್ಲೂ ಕಡ್ಡಾಯವಾಗಿ ರೌಂಡ್ಸ್ ನಡೆಸುವಂತೆ ಸೂಚನೆ ನೀಡಲಾಗಿದೆ. ಜೈಲಿನ ಆಡಳಿತ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜನವರಿಯಲ್ಲಿ ಜೈಲಿನೊಳಗೆ ಗಾಂಜಾ ಸೇವನೆ ನಡೆದಿರುವ ವೀಡಿಯೊ ವೈರಲ್ ಆದ ಬಳಿಕ ತಾವು ಕಲಬುರಗಿಗೆ ಭೇಟಿ ನೀಡಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾಗಿ ತಿಳಿಸಿದ ಅವರು, "ಆ ನಂತರ ಜೈಲಿನಲ್ಲಿ ಗಾಂಜಾ ಸಂಬಂಧಿತ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಈಗ ಮತ್ತಷ್ಟು ಸುಧಾರಣಾ ಕ್ರಮಗಳ ಪರಿಶೀಲನೆಗಾಗಿ ಮತ್ತೆ ಭೇಟಿ ನೀಡಿದ್ದೇನೆ" ಎಂದು ಹೇಳಿದರು.
867 ಹುದ್ದೆಗಳ ನೇಮಕಾತಿ ಶೀಘ್ರ
ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯಲ್ಲಿ ರಾಜ್ಯಾದ್ಯಂತ ಖಾಲಿ ಇರುವ 867 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ಭಾಗದ 400 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಡಿಜಿಪಿ ಅಲೋಕಕುಮಾರ್ ತಿಳಿಸಿದರು. ಆದರೆ, ಸಂಪೂರ್ಣ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದರಿಂದ ಎರಡು ವರ್ಷಗಳವರೆಗೆ ಸಮಯ ಬೇಕಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಇಲಾಖೆಯ ಕಾರ್ಯನಿರ್ವಹಣೆಗೆ ಅಡಚಣೆಯಾಗದಂತೆ ಮಾಜಿ ಸೈನಿಕರನ್ನು (ಎಕ್ಸ್ ಸರ್ವಿಸ್‌ಮೆನ್) ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳುವ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.






