ಅಭಿವೃದ್ಧಿ ಬಗ್ಗೆ ಪ್ರಶ್ನಿಸುವ ಮೊದಲು ಅವರ 20 ವರ್ಷಗಳ ಸಾಧನೆ ಹೇಳಲಿ: ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಳೆದ 20 ವರ್ಷಗಳ ಅವಧಿಯಲ್ಲಿ ತಮ್ಮ ಕುಟುಂಬದವರೇ ಶಾಸಕರಾಗಿದ್ದರೂ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಏಕೆ ಆಗಲಿಲ್ಲ ಎಂಬುದನ್ನು ಬಿಜೆಪಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮೊದಲು ಕ್ಷೇತ್ರದ ಜನರಿಗೆ ಉತ್ತರಿಸಲಿ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ತಿರುಗೇಟು ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೂರು ವರ್ಷಗಳ ಹಿಂದೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ಜನರ ಬಳಿಗೆ ತೆರಳಿ, ಕ್ಷೇತ್ರದ ಅಭಿವೃದ್ಧಿ ಕುರಿತು ಪ್ರಶ್ನಿಸುವಂತೆ ಹಾಗೂ ನಿದ್ದೆಯಿಂದ ಎಚ್ಚೆತ್ತುಕೊಳ್ಳುವಂತೆ ನಾನು ಜಾಗೃತಿ ಮೂಡಿಸಿದ್ದೇನೆ. ಆದರೆ, ಕಳೆದ ಎರಡು ದಶಕಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದವರು ತಮ್ಮ ಅವಧಿಯ ಸಾಧನೆ ಏನು ಎಂಬುದನ್ನು ಮೊದಲು ತಿಳಿಸಬೇಕು” ಎಂದು ಹೇಳಿದರು.
ಅಪ್ಪ, ಅವ್ವ ಹಾಗೂ ಮಗ ಮೂವರು ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದರೂ ಜನರ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಿದ್ದಾರೆ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ. ರೈತರು ಮತ್ತು ಬಡವರ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಒಂದೇ ಒಂದು ದಿನ ಧ್ವನಿ ಎತ್ತಿದ ಉದಾಹರಣೆ ಇದೆಯೇ ಎಂದು ಪ್ರಶ್ನಿಸಿದ ಅವರು, ರೈತರಿಗೆ ಬೆಳೆ ವಿಮೆ ಪರಿಹಾರ ದೊರಕಿಸಲು ತಾವು ಸದನದಲ್ಲಿ ಧ್ವನಿ ಎತ್ತಿರುವುದನ್ನು ನಾಟಕ ಎಂದು ಬಣ್ಣಿಸುವುದು ರೈತರಿಗೇ ಮಾಡುವ ಅಪಮಾನ ಎಂದರು.
ತಾನು ಹಿಂದೂ ಎಂದು ಹೇಳಿಕೊಂಡು ಭಾಷಣ ಮಾಡುವ ಮಾಜಿ ಶಾಸಕರು ತಮ್ಮ ಅವಧಿಯಲ್ಲಿ ಒಂದಾದರೂ ದೇವಸ್ಥಾನದ ಜೀರ್ಣೋದ್ಧಾರ ಅಥವಾ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆಯೇ ಎಂದು ಪ್ರಶ್ನಿಸಿದ ಅಲ್ಲಮಪ್ರಭು ಪಾಟೀಲ, ತಮ್ಮ ಅವಧಿಯಲ್ಲಿ ಹಡಗಿಲ್, ಉದನೂರ, ಕಣ್ಣಿ ಸೇರಿದಂತೆ ಕ್ಷೇತ್ರದ ಹಲವು ಗ್ರಾಮಗಳ ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಾಜಿ ಶಾಸಕರು ಬೇಕಾದರೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಿ ಎಂದು ಸವಾಲು ಹಾಕಿದರು.
ಸಿಎ ಸೈಟ್‌ಗಳ ಮೂಲಕ ಹಣದ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವವರು ಹಾಗೂ 20 ಎಕರೆ ಭೂಮಿಗೆ ಸಂಬಂಧಿಸಿದ ವಿವಾದದ ಕುರಿತು ಪ್ರಶ್ನೆ ಎದುರಾದಾಗ ಮೌನವಾಗಿದ್ದವರು ಈಗ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಪ್ರಶ್ನಿಸುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದರು. “ನಮ್ಮ ಅವಧಿಯ ಸಾಧನೆ ಕುರಿತು ಪ್ರಶ್ನೆ ಕೇಳುತ್ತಿರುವವರಿಗೆ ಜನರೇ ಉತ್ತರ ನೀಡುತ್ತಾರೆ. ಈಗಾಗಲೇ ಜನರು ಉತ್ತರ ನೀಡಲಾರಂಭಿಸಿದ್ದಾರೆ” ಎಂದರು.
ಕ್ಷೇತ್ರದಲ್ಲಿ ₹16.84 ಕೋಟಿ ಅಭಿವೃದ್ಧಿ ಕಾಮಗಾರಿ
ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಜಲಸಂಪನ್ಮೂಲ ಹಾಗೂ ಅಂತರ್ಜಲ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ಪಟ್ಟಣ, ಸಿಂದಗಿ, ಮೇಳಕುಂದಾ ಸೇರಿದಂತೆ ವಿವಿಧೆಡೆ ₹8 ಕೋಟಿ ವೆಚ್ಚದಲ್ಲಿ ಆಣೆಕಟ್ಟು ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ₹6.14 ಕೋಟಿ ವೆಚ್ಚದಲ್ಲಿ ಜಿನುಗು ಕೆರೆ ನಿರ್ಮಾಣ ಹಾಗೂ ಹುಣಸಿಹಡಿಲ್‌ನಲ್ಲಿ ₹1 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ವಿಶೇಷ ಘಟಕದಡಿ 20 ಕೊಳವೆ ಬಾವಿಗಳ ನಿರ್ಮಾಣಕ್ಕೆ ₹1 ಕೋಟಿ ಸೇರಿದಂತೆ ಒಟ್ಟು ₹16.84 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅಂತರ್ಜಲ ಅಭಿವೃದ್ಧಿಗಾಗಿ ₹24.34 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.
90 ಸಾವಿರಕ್ಕೂ ಹೆಚ್ಚು ರೈತರಿಗೆ ಪರಿಹಾರ:
ಕಳೆದ ಮೂರು ವರ್ಷಗಳಲ್ಲಿ 90,168 ರೈತರಿಗೆ ಒಟ್ಟು ₹130.526 ಕೋಟಿ ಪರಿಹಾರ ನೀಡಲಾಗಿದೆ. ಸಂಕಷ್ಟದಲ್ಲಿದ್ದ ರೈತರಿಗೆ 222 ಕ್ವಿಂಟಲ್ ಕಿರು ಬಿತ್ತನೆ ಬೀಜ ವಿತರಿಸಲಾಗಿದೆ. ಇದೇ ಅವಧಿಯಲ್ಲಿ ₹10.84 ಕೋಟಿ ವೆಚ್ಚದಲ್ಲಿ 7,083 ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ 129 ಬಾವಿಗಳ ನಿರ್ಮಾಣ, ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನ ವಿತರಣೆ, 120 ಫಲಾನುಭವಿಗಳಿಗೆ ವಿವಿಧ ಸಾಲ ಸೌಲಭ್ಯ ಹಾಗೂ 46 ಜನರಿಗೆ ಹೊಲಿಗೆ ಯಂತ್ರ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಕ್ಷೇತ್ರದ ರಸ್ತೆಗಳ ಸಮಸ್ಯೆಯ ಬಗ್ಗೆಯೂ ಮಾತನಾಡಿದ ಅವರು, ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುವುದು. ಮುಂದಿನ ಆರು ತಿಂಗಳೊಳಗೆ ಕ್ಷೇತ್ರದ ಎಲ್ಲ ರಸ್ತೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
“ಮೊದಲು ಸತ್ಯಾಂಶ ಅರಿತು ಮಾತನಾಡುವುದನ್ನು ಕಲಿಯಬೇಕು. ತಮ್ಮ ಅವಧಿಯಲ್ಲಿ ನಡೆದಿರುವ ಲೋಪಗಳ ಹೊಣೆಯನ್ನು ಮತ್ತೊಬ್ಬರ ಮೇಲೂ ಹಾಕುವ ಪ್ರಯತ್ನ ಸರಿಯಲ್ಲ. ಲೂಟಿ ಹೊಡೆದವರು ಮತ್ತೊಬ್ಬರನ್ನೂ ತಮ್ಮ ತಕ್ಕಡಿಯಲ್ಲೇ ತೂಗುವುದು ಎಷ್ಟು ಸರಿ ಎಂಬುದನ್ನು ಕ್ಷೇತ್ರದ ಜನರೇ ನಿರ್ಧರಿಸಲಿದ್ದಾರೆ” ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ವಿರುದ್ಧ ಅಲ್ಲಮಪ್ರಭು ಪಾಟೀಲ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ವರ್ಷಾ ಜಾನೆ, ಗ್ಯಾರಂಟಿ ಯೋಜನೆಗಳ ಪ್ರತಿಷ್ಠಾನದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ್, ಬಾಬು ವಂಟಿ, ಸಂತೋಷ ಪಾಟೀಲ ದಣ್ಣೂರ, ಭೀಮರಾವ ಮೇಳಕುಂದಿ, ಸಂಗಮೇಶ ನಾಗನಳ್ಳಿ, ಶಿವರಾಯ ಬಾಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






