ಸವಿತಾ ಮಹರ್ಷಿ ತತ್ವಗಳನ್ನು ಪಾಲಿಸೋಣ: ಶಾಸಕ ಅಲ್ಲಂ ಪ್ರಭು ಪಾಟೀಲ

ಕಲಬುರಗಿ: ಸವಿತಾ ಮಹರ್ಷಿ ಸಮಾಜ ಬಹುಕಾಲದಿಂದಲೂ ಉತ್ತಮ ಕಾಯಕ ನಿಷ್ಠೆಯನ್ನು ಹೊಂದಿದ್ದು, ನಾವೆಲ್ಲರೂ ಶ್ರೀ ಸವಿತಾ ಮಹರ್ಷಿ ತತ್ವಗಳನ್ನು ಪಾಲಿಸೋಣ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ ಅವರು ಹೇಳಿದರು.
ಮಂಗಳವಾರದಂದು ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಶ್ರೀ ಸವಿತಾ ಮಹರ್ಷಿ ಅವರ ಭಾವಚಿತ್ರ ಪುಷ್ಫಾರ್ಚನೆ ಮಾಡಿ, ಜ್ಯೋತಿ ಬೆಳಗಿಸಿ ಮಾತನಾಡಿದರು.
ಸವಿತಾ ಸಮುದಾಯವು ಸೇವಾ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಈ ಸಮಾಜದವರು ಕಾಯಕ ನಿಷ್ಠರು ಮತ್ತು ಪ್ರಾಮಾಣಿಕರು ಆಗಿದ್ದಾರೆ. ಈ ಸಮಾಜದ ಯಾವುದೇ ರೀತಿಯ ಸಮಸ್ಯೆ ಇದ್ದರು ನಾವು ಪರಿಹರಿಸುತ್ತೇವೆ ಎಂದರು.
ಕಲ್ಲಹಂಗರಗಾ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಶ್ರೀನಿವಾಸ ನಾಲವರಕರ್ ಮಾತನಾಡಿ, ಸವಿತಾ ಸಮಾಜದವರು ಶೈಕ್ಷಣಕವಾಗಿ ಸಂಘಟಿತರಾಗಬೇಕು, ಸವಿತಾ ಸಮಾಜವನ್ನು ಪ್ರವರ್ಗ 2ಎ ನಿಂದ ಪ್ರವರ್ಗ 1 ಕ್ಕೆ ಸೇರ್ಪಡಿಸಿದರೆ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.
ಸವಿತಾ ಸಮಾಜವು ಪೌರಾಣಿಕವಾಗಿ, ಐತಿಹಾಸಿಕವಾಗಿ, ತನ್ನದೇ ಇತಿಹಾಸವನ್ನು ಹೊಂದಿದೆ. ನಾಲ್ಕು ವೇದಗಳಲ್ಲಿ ಒಂದಾದ ಸಾಮವೇದವನ್ನು ಸಂಗೀತಕ್ಕೆ ಸಂಬಂಧಿಸಿದೆ
12 ನೇ ಶತಮಾನದಲ್ಲಿ ಕಲ್ಯಾಣ ವಚನ ಸಾಹಿತ್ಯದಲ್ಲಿ ಹಡಪದ ಅಪ್ಪಣ್ಣ, ಹಡಪದ ಲಿಂಗಮ್ಮ ಶಿವಶರಣರು ಇದ್ದರು ಸವಿತಾ ಸಮಾಜದವರು ವೈದ್ಯ ಕ್ಷೌರಿಕ, ಡೋಲು, ನಾದಸ್ವರ, ವಾದನ ವಿವಿಧ ಕಾಯಕದಲ್ಲಿ ತೊಡಗಿದ್ದಾರೆ. ಸಮಾಜದವರು ಉತ್ತಮ ಶಿಕ್ಷಣ ಪಡೆಯಬೇಕು, ಸರ್ಕಾರದಿಂದ ಇರುವ ವಿವಿಧ ಸೌಲಭ್ಯಗಳನ್ನು ಪಡೆಯಬೇಕು ಎಂದರು.
ಸವಿತಾ ಮಹರ್ಷಿ ಸಮಾಜದ ಜಿಲ್ಲಾಧ್ಯಕ್ಷ ಆನಂದ ವಾರಿಕ್ ಮಾತನಾಡಿ, ಸಂಗೀತ ಶಾಲೆಯಲ್ಲಿ ತೆರೆಯಲು ಸರ್ಕಾರದಿಂದ 2 ಎಕರೆ ಭೂಮಿಯನ್ನು ಮಂಜೂರು ಮಾಡಲು ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಸ್ವಾಗತಿಸಿದರು.
ಬೆಳಿಗ್ಗೆ ಸವಿತಾ ಮಹರ್ಷಿ ಮಂದಿರವನ್ನು ಸವಿತಾನಂದ ಸರಸ್ವತಿ ಸವಿತಾ ಪೀಠ ಕೊಂಚುರ ಮಹಾಸ್ವಾಮಿ, ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ಸೇರಿದಂತೆ ಅಧಿಕಾರಿಗಳು, ಸಮಾಜದ ಇತರ ಮುಖಂಡರು ಇದ್ದರು.