2028ರ ಚುನಾವಣೆ ವೇಳೆಗೆ ದಲಿತ ಸಿಎಂ ಬಗ್ಗೆ ಗಂಭೀರ ಚರ್ಚೆ : ಸತೀಶ್ ಜಾರಕಿಹೊಳಿ

ಕಲಬುರಗಿ: ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ದಲಿತ ಸಿಎಂ ಕೂಗು ಕೇಳಿ ಬಂದಿಲ್ಲ. ಮುಂದಿನ ಚುನಾವಣೆ ಘೋಷಣೆ ಆದ ಬಳಿಕ ಈ ಬಗ್ಗೆ ಗಂಭೀರ ಚರ್ಚೆ ಮಾಡೋಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸದ್ಯ ದಲಿತ ಸಿಎಂ ಕೂಗು ಕೇಳಿಬಂದಿಲ್ಲ. ಅದಕ್ಕೆ ಸಂಪೂರ್ಣ ಅಲ್ಪವಿರಾಮ ಹಾಕಲಾಗಿದೆ. ಮುಂಬರುವ 2028ರ ವಿಧಾನಸಭೆ ಚುನಾವಣೆಯ ವೇಳೆಗೆ ಅದರ ಬಗ್ಗೆ ಗಂಭೀರವಾಗಿ ಚರ್ಚೆ ಮಾಡೋಣ ಎಂದರು.
ನವೆಂಬರ್ ತಿಂಗಳಲ್ಲಿ ಸಿಎಂ ಬದಲಾವಣೆ ಎಂದು ಎಚ್.ವಿಶ್ವನಾಥ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಅವರ ಹೇಳಿಕೆಗೂ ನಮಗೂ ಸಂಬಂಧ ಇಲ್ಲ. ಅವರು ನಮ್ಮ ಪಕ್ಷದವರಲ್ಲ. ನಮ್ಮ ಪಕ್ಷದವರು ಹೇಳಿದ್ರೆ ಅದಕ್ಕೆ ಪ್ರತಿಕ್ರಿಯೆ ನೀಡಬಹುದು. ಅವರ ಹೇಳಿಕೆಗೂ ನಮಗೂ ಯಾವ ಸಂಬಂಧ ಇಲ್ಲ ಎಂದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಇಲ್ಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ 2 ವರ್ಷಗಳಿಂದ ಬಿಜೆಪಿಯವರು ಇದನ್ನೇ ಹೇಳಿದ್ದಾರೆ. ಇನ್ನೂ 3 ವರ್ಷ ಬಿಜೆಪಿಯವರು ಗ್ಯಾರಂಟಿಯಿಂದಾಗಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಹೇಳುತ್ತಾರೆ. ಗ್ಯಾರಂಟಿಯಿಂದ ಯಾವ ಅಭಿವೃದ್ಧಿ ಕೂಡ ನಿಂತಿಲ್ಲ. ಬೊಮ್ಮಾಯಿ ಅವಧಿಯಲ್ಲಿ ಸರಕಾರಿ ಇಲಾಖೆಗಳಿಗೆ ಅನುದಾನ ಇರಲಿಲ್ಲ. ನಮ್ಮ ಸರಕಾರದಲ್ಲಿ ಎಲ್ಲಾ ಇಲಾಖೆಗಳಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರಕ್ಕೆ ನಾವು 2 ಲಕ್ಷ ಕೋಟಿ ಜಿಎಸ್ಟಿ ಹಣ ಕೊಡುತ್ತವೆ. ಹೀಗಾಗಿ ಅದರ ಅರ್ಧ ಹಣವಾದ್ರು ಕೇಂದ್ರ ಸರಕಾರ ನಮಗೆ ಕೊಡಬೇಕು. ಸದ್ಯ 36 ಸಾವಿರ ಕೋಟಿ ಜಿಎಸ್ಟಿ ಹಣ ಮಾತ್ರ ನಮಗೆ ಕೊಟ್ಟಿದ್ದಾರೆ. ನಮ್ಮ ತೆರಿಗೆ ಹಣವನ್ನು ಯಮುನಾ, ಗಂಗಾ ಎಕ್ಸಪ್ರೆಸ್‌ವೇಗಳಿಗೆ ಬಳಕೆ ಮಾಡುತ್ತಿದ್ದಾರೆ. ನಮ್ಮ ತೆರಿಗೆ ಹಣದಿಂದ ಉತ್ತರ ಪ್ರದೇಶ, ಬಿಹಾರ ಇತರೆ ರಾಜ್ಯಗಳಲ್ಲಿ ರಸ್ತೆಗಳು ನಿರ್ಮಾಣವಾಗುತ್ತಿದೆ. ನಾವು ಕಟ್ಟುವ ಜಿಎಸ್ಟಿಯ ಅರ್ಧದಷ್ಟು ಹಣವಾದರು ಕೇಂದ್ರ ನಮಗೆ ವಾಪಸ್ ಕೊಡಲಿ ಎಂದು ಒತ್ತಾಯಿಸಿದರು.







