Kalaburagi | ತಪ್ಪಾದ ಪಾನ್ ಲಿಂಕ್ನಿಂದ ಸಿಬಿಲ್ ಸ್ಕೋರ್ಗೆ ಹಾನಿ: ಗ್ರಾಹಕನಿಗೆ 40,000 ರೂ. ಪರಿಹಾರ ನೀಡಲು ಎಲ್ಐಸಿ ಹೌಸಿಂಗ್ ಫೈನಾನ್ಸ್ಗೆ ಗ್ರಾಹಕ ಆಯೋಗ ಆದೇಶ

ಸಾಂದರ್ಭಿಕ ಚಿತ್ರ (AI)
ಕಲಬುರಗಿ: ಗ್ರಾಹಕರ ಪಾನ್ ಸಂಖ್ಯೆಯನ್ನು ತಪ್ಪಾಗಿ ಮತ್ತೊಬ್ಬರ ಬ್ಯಾಂಕ್ ಖಾತೆಗೆ ಜೋಡಣೆ ಮಾಡಿದ್ದರಿಂದ ಸಿಬಿಲ್ ಸ್ಕೋರ್ ಹಾನಿಗೊಳಗಾದ ಪ್ರಕರಣದಲ್ಲಿ, ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ವಿರುದ್ಧ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದ್ದು, ಗ್ರಾಹಕರಿಗೆ 40 ಸಾವಿರ ರೂ. ಪರಿಹಾರ ಹಾಗೂ ಖರ್ಚು ಪಾವತಿಸಲು ಆದೇಶಿಸಿದೆ.
ಪ್ರಕರಣದ ವಿವರಗಳ ಪ್ರಕಾರ, ಕಲಬುರಗಿಯ ನಿವಾಸಿ ಆನಂದ ಪ್ರಭು ಎಂಬವರು ಮನೆ ಖರೀದಿಗಾಗಿ 2021ರ ಎಪ್ರಿಲ್ 26ರಂದು ಎಲ್ಐಸಿ ಹೌಸಿಂಗ್ ಫೈನಾನ್ಸ್ನಿಂದ ರೂ. 30 ಲಕ್ಷ ಗೃಹಸಾಲ ಪಡೆದಿದ್ದರು. ಬಳಿಕ 2023ರ ನವೆಂಬರ್ 21ರಂದು ಬ್ಯಾಂಕ್ ಆಫ್ ಬರೋಡಾ, ಕಲಬುರಗಿ ಶಾಖೆಯಿಂದ ಹೊಸ ಸಾಲ ಪಡೆದು, ಎಲ್ಐಸಿ ಹೌಸಿಂಗ್ ಫೈನಾನ್ಸ್ನ ಬಾಕಿ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದ್ದರು.
ಆದರೆ 2024ರ ನವೆಂಬರ್ 9ರಂದು ಎಲ್ಐಸಿ ಹೌಸಿಂಗ್ ಫೈನಾನ್ಸ್ನ ನೋಯ್ಡಾ ಶಾಖೆಯಿಂದ ನಡೆದ ತಾಂತ್ರಿಕ ಅಥವಾ ಆಡಳಿತಾತ್ಮಕ ತಪ್ಪಿನಿಂದಾಗಿ, ದೂರುದಾರರ ಪಾನ್ ಸಂಖ್ಯೆಯನ್ನು ಮತ್ತೊಬ್ಬರ ಬ್ಯಾಂಕ್ ಖಾತೆ ಸಂಖ್ಯೆಗೆ ಜೋಡಣೆ ಮಾಡಲಾಗಿತ್ತು. ಇದರ ಪರಿಣಾಮವಾಗಿ ದೂರುದಾರರ ಸಿಬಿಲ್ ಸ್ಕೋರ್ ಕುಸಿತಗೊಂಡು ಆರ್ಥಿಕ ಹಾಗೂ ಮಾನಸಿಕ ತೊಂದರೆ ಉಂಟಾಗಿತ್ತು.
ಈ ಕುರಿತು ಹಲವು ಬಾರಿ ಎಲ್ಐಸಿ ಹೌಸಿಂಗ್ ಫೈನಾನ್ಸ್ ಕಚೇರಿಗೆ ಭೇಟಿ ನೀಡಿ ತಪ್ಪನ್ನು ಸರಿಪಡಿಸುವಂತೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ದೂರುದಾರರು ವಕೀಲ ಶಿವಪ್ರಕಾಶ ಸರಡಗಿ ಅವರ ಮೂಲಕ 2025ರ ಜೂನ್ 3ರಂದು ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ, ಕಲಬುರಗಿಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಆಯೋಗವು ದಾಖಲೆಗಳು ಹಾಗೂ ಎರಡೂ ಪಕ್ಷಗಳ ವಾದಗಳನ್ನು ಪರಿಶೀಲಿಸಿ, ಸೇವಾ ದೋಷ (Deficiency in Service) ನಡೆದಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಭಾರಿ ಅಧ್ಯಕ್ಷೆ ಮಾಲತಿ ಗುರಣ್ಣ ಹಾಗೂ ಸದಸ್ಯ ಲೋಕೇಶ್ ಅವರಿದ್ದ ಪೀಠವು ಇದೇ ಜೂನ್ 11ರಂದು ನೀಡಿದ ತೀರ್ಪಿನಲ್ಲಿ, ಎಲ್ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆಗೆ ದೂರುದಾರರ ಪ್ಯಾನ್ ಸಂಖ್ಯೆಯನ್ನು ತಪ್ಪಾಗಿ ಜೋಡಣೆಗೊಂಡಿರುವ ಖಾತೆಯಿಂದ ಬೇರ್ಪಡಿಸಿ ಸರಿಪಡಿಸುವಂತೆ ಹಾಗೂ ಸಾಲ ಸಂಪೂರ್ಣ ಮರುಪಾವತಿಯಾಗಿರುವುದನ್ನು ದೃಢೀಕರಿಸುವ ʼಸಾಲ ವಿಮುಕ್ತಿ ಪತ್ರʼ (No Due Certificate) ನೀಡುವಂತೆ ನಿರ್ದೇಶಿಸಿದೆ.
ಇದಲ್ಲದೆ, ದೂರುದಾರರಿಗೆ 25,000 ಪರಿಹಾರ, 10,000 ಮಾನಸಿಕ ಯಾತನೆಗಾಗಿ ಪರಿಹಾರ, ₹5,000 ದಾವೆ ವೆಚ್ಚ, ಹೀಗೆ ಒಟ್ಟು 40,000 ಮೊತ್ತವನ್ನು 45 ದಿನಗಳೊಳಗೆ ಪಾವತಿಸಬೇಕು ಎಂದು ಆದೇಶಿಸಿದೆ. ಅಲ್ಲದೆ, 45 ದಿನಗಳೊಳಗೆ ಪಾನ್ ಸಂಖ್ಯೆ ಸಂಬಂಧಿತ ದೋಷವನ್ನು ಸರಿಪಡಿಸಲು ವಿಫಲವಾದಲ್ಲಿ, ಪ್ರತಿದಿನಕ್ಕೆ ₹500 ದಂಡವನ್ನು ದೂರುದಾರರಿಗೆ ಪಾವತಿಸಬೇಕೆಂದು ಆಯೋಗ ತನ್ನ ಅಂತಿಮ ಆದೇಶದಲ್ಲಿ ಸ್ಪಷ್ಟಪಡಿಸಿದೆ.






