ಪುರಾಣ ಪ್ರವಚನ ಆಲಿಕೆಯಿಂದ ಮನಸ್ಸಿಗೆ ನೆಮ್ಮದಿ: ಡಾ.ಶಾಂತವೀರ ಶಿವಾಚಾರ್ಯರು

ಕಾಳಗಿ: ಇಂದಿನ ಆಧುನಿಕ ಬದುಕಿನಲ್ಲಿ ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದು ಗಡಿಗೌಡಗಾಂವ ಹಾವಗಿಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೂಜ್ಯ ಡಾ.ಶಾಂತವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ತಾಲೂಕಿನ ಸುಂಠಾಣ ಗ್ರಾಮದಲ್ಲಿ ಸೋಮವಾರ ಸುಗೂರು ಶ್ರೀ ಗುರು ರುದ್ರಮುನೀಶ್ವರ ಹಿರೇಮಠದ ಸುಂಠಾಣ ಶಾಖಾ ಮಠದ ನೂತನ ಗುರುಭವನ ಲೋಕಾರ್ಪಣೆ ಹಾಗೂ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಡಾ.ಶಾಂತವೀರ ಶಿವಾಚಾರ್ಯರು, ಪ್ರವಚನ ಹಾಗೂ ಪುರಾಣಗಳು ಮನುಷ್ಯನಿಗೆ ಸನ್ಮಾರ್ಗದಲ್ಲಿ ಸಾಗಲು ನೆರವಾಗುತ್ತದೆ. ಮಠಮಾನ್ಯಗಳು ಪುರಾಣ ಪ್ರವಚನದಿಂದಲೇ ಜನರಲ್ಲಿ ಧಾರ್ಮಿಕತೆಯನ್ನು ಹೆಚ್ಚಿಸಿ, ಸಂಸ್ಕೃತಿ, ಸಂಸ್ಕಾರ ಮತ್ತು ಸಂಪ್ರದಾಯವನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.
ಈ ವೇಳೆ ಚಂದನಕೇರಾದ ಪೂಜ್ಯ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಗುಂಡೇಪಲ್ಲಿ(ಕೆ) ಪೂಜ್ಯ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಈ ವೇಳೆ ಉದ್ಯಮಿ ಮಲ್ಲಿನಾಥ ಕೋಲಕುಂದಿ, ಮಲ್ಲಿಕಾರ್ಜುನ ಮರತೂರಕರ್ ಮಾತನಾಡಿದರು. ಪೂಜ್ಯ ಡಾ. ಚನ್ನರುದ್ರಮುನಿ ಶಿವಾಚಾರ್ಯರು, ರಟಕಲನ ಪೂಜ್ಯ ನೀಲಕಂಠ ದೇವರು ಸಾನಿಧ್ಯ ವಹಿಸಿದ್ದರು.
ಮಾಜಿ ಜಿ.ಪಂ ಸದಸ್ಯ ರಾಜೇಶ ಗುತ್ತೇದಾರ್, ಮುಖಂಡರಾದ ರೇವಣಸದ್ದಪ್ಪ ಮಾಸ್ತರ ಚಿಂಚೋಳಿ, ಬಸವರಾಜ ಪಾಟೀಲ್ ಹೇರೂರ್, ಸಂತೋಷ್ ಪಾಟೀಲ್ ಮಂಗಲಗಿ, ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ, ಗ್ರಾ.ಪಂ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಯಲಮಡಗಿ ಸೇರಿದಂತೆ ಸುಂರಾಣ ಹಾಗೂ ಸುತ್ತಲಿನ ಗ್ರಾಮಸ್ಥರು ಈ ವೇಳೆ ಉಪಸ್ಥಿತರಿದ್ದರು.







