ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನಕ್ಕೆ ಮಹಿಪಾಲರೆಡ್ಡಿ ಮುನ್ನೂರ ಸರ್ವಾಧ್ಯಕ್ಷ

ಸೇಡಂ : ಕಳೆದ ಮೂರು ದಶಕಗಳಿಗೂ ಅಧಿಕ ಕಾಲದಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಅವರು ಉದಯೋನ್ಮುಖ ಪತ್ರಕರ್ತರಿಗೆ ಪ್ರೇರಣೆಯಾಗಿದ್ದಾರೆ ಎಂದು ಪ್ರಜಾ ಸುದ್ದಿ ಸಂಪಾದಕ ಶರಣು ಸೂಗೂರ ಹೇಳಿದರು.
ಕಲಬುರಗಿಯಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಹಿಪಾಲರೆಡ್ಡಿ ಮುನ್ನೂರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ, ಸೇಡಂ ನಗರದಲ್ಲಿನ ಅವರ ನಿವಾಸದಲ್ಲಿ ಗೃಹ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮ ಕ್ಷೇತ್ರದ ವಿವಿಧ ವಿಚಾರಧಾರೆಗಳನ್ನು ಅಭಿವ್ಯಕ್ತಿಗೊಳಿಸುವ ಉದ್ದೇಶದಿಂದ ಕಳೆದ ವರ್ಷದಿಂದ ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಎರಡನೇ ವರ್ಷದ ಸಮ್ಮೇಳನಕ್ಕೆ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಅವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಹಿಂದಿನ ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಮಹಿಪಾಲರೆಡ್ಡಿ ಮುನ್ನೂರ ಅವರು ಸ್ನೇಹಜೀವಿಯಾಗಿದ್ದು, ಎಲ್ಲರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದಾರೆ. ಸುಮಾರು 35 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾಹಿತ್ಯ, ಸಿನಿಮಾ, ರಂಗಭೂಮಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಶ್ಲಾಘಿಸಿದರು.
ಅವರ ಅನುಭವ, ಬದ್ಧತೆ ಹಾಗೂ ಸಾಮಾಜಿಕ ಕಾಳಜಿಯನ್ನು ಪರಿಗಣಿಸಿ ಈ ಬಾರಿಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸೂಕ್ತ ನಿರ್ಧಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಹಿರಿಯ ಪತ್ರಕರ್ತರಾದ ಪ್ರಭಾಕರ ಜೋಶಿ, ಹಿರಿಯ ಸಾಹಿತಿಗಳಾದ ಲಿಂಗಾರೆಡ್ಡಿ ಶೇರಿ, ಬಿ.ಆರ್.ಅಣ್ಣಾಸಾಗರ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಂಗಾವ, ಪತ್ರಕರ್ತರಾದ ಅವಿನಾಶ ಬೋರಂಚಿ, ಆದಿತ್ಯ ಜೋಶಿ, ಸುಧೀರ ಬಿರಾದಾರ, ಸುರೇಶ ಬಿಜನಳ್ಳಿ, ಪ್ರಮುಖರಾದ ಶ್ರೀಪಾದ ಜೋಶಿ, ಜನಾರ್ದನರೆಡ್ಡಿ ತುಳೇರ ಸೇರಿದಂತೆ ಮಹಿಪಾಲರೆಡ್ಡಿ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಕಳೆದ 35 ವರ್ಷಗಳ ಪತ್ರಿಕೋದ್ಯಮದ ಪಯಣದಲ್ಲಿ ಅನೇಕ ಸಿಹಿ-ಕಹಿ ಅನುಭವಗಳನ್ನು ಕಂಡಿದ್ದೇನೆ. ಈ ರೀತಿಯ ಗೌರವಗಳು ಮತ್ತಷ್ಟು ಉತ್ಸಾಹ ಹಾಗೂ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಪತ್ರಕರ್ತ ಮಿತ್ರರು ಹಾಗೂ ಸ್ನೇಹ ಬಳಗದ ಅಭಿಲಾಷೆಯಂತೆ ಕಲ್ಯಾಣ ಕರ್ನಾಟಕ ಪತ್ರಕರ್ತರ ಸಮ್ಮೇಳನದ ಸರ್ವಾಧ್ಯಕ್ಷರ ಜವಾಬ್ದಾರಿಯನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದು, ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
- ಮಹಿಪಾಲರೆಡ್ಡಿ ಮುನ್ನೂರ, ಕಕ ಪತ್ರಕರ್ತರ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ






