ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಸ್ವಾವಲಂಬಿಗಳಾಗಿ: ಶಾಸಕ ಅಲ್ಲಮಪ್ರಭು ಪಾಟೀಲ್
ಸ್ವಾವಲಂಬಿ ಸಾರಥಿ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ, ಹೊಲಿಗೆ ಯಂತ್ರೋಪಕರಣ ವಿತರಣೆ

ಕಲಬುರಗಿ: ಹಿಂದುಳಿದ ವರ್ಗಗಳ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಜನಪರ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಂತ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ವಿವಿಧ ನಿಗಮಗಳ ವತಿಯಿಂದ 2025-26ನೇ ಸಾಲಿನ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಹಾಗೂ ಹೊಲಿಗೆ ಯಂತ್ರೋಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ನಿಗಮಗಳ ಮೂಲಕ ಯುವಕರು, ಮಹಿಳೆಯರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಲಾಗುತ್ತಿದೆ. ಸ್ವಾವಲಂಬಿ ಸಾರಥಿ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ನೆರವನ್ನು ಕೇವಲ ಸೌಲಭ್ಯವಾಗಿ ಪರಿಗಣಿಸದೆ, ಅದನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ವಿಶೇಷವಾಗಿ ಮಹಿಳೆಯರು ಹೊಲಿಗೆ ಯಂತ್ರೋಪಕರಣಗಳಂತಹ ಸೌಲಭ್ಯಗಳನ್ನು ಬಳಸಿಕೊಂಡು ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಆಯ್ಕೆಯಾದ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರೋಪಕರಣಗಳನ್ನು ವಿತರಿಸಿ ಶುಭ ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ನಾಮನಿರ್ದೇಶಕಿ ವಾಣಿಶ್ರೀ ಸಗರಕರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ತಾರಫೈಲ್, ಪಾಲಿಕೆ ಸದಸ್ಯ ಶೇಖ್ ಹುಸೇನ್, ಕಲಬುರಗಿ ಎಪಿಎಂಸಿ ಸದಸ್ಯರಾದ ನಾಗೇಶ್ ಡಿ. ಮುಚಖೇಡ, ರವಿ ಪಾಟೀಲ್ ಮೇಳಕುಂದ, ಪಕ್ಷದ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ ನಂದಿಕೂರ, ಮೋದಿನ್ ಪಟೇಲ್ ಅಣಬಿ, ನಿಗಮದ ವ್ಯವಸ್ಥಾಪಕ ಜಗದೇವಪ್ಪ ಮುಗಟಾ, ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.






