ವಾಡಿ: ರುದ್ರಪ್ಪ ಲಮಾಣಿಗೆ ಸಚಿವ, ಪ್ರಿಯಾಂಕ್ ಖರ್ಗೆಗೆ ಡಿಸಿಎಂ ಹುದ್ದೆ ನೀಡಲು ಒತ್ತಾಯ

ವಾಡಿ: ಬಂಜಾರ ಸಮುದಾಯ ಏಕೈಕ ವ್ಯಕ್ತಿ ಹಾವೇರಿ ಕ್ಷೇತ್ರದ ರುದ್ರಪ್ಪ ಲಮಾಣಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ನೀಡಿ ಬಂಜಾರರ ಅಸ್ಮಿತೆ ಮತ್ತು ಭಾವನೆಗೆ ಬೆಲೆ ನೀಡಬೇಕು ಎಂದು ಬಂಜಾರ ಸೇವಾಸಂಘದ ಅಧ್ಯಕ್ಷ ರಮೇಶ ಕಾರಬಾರಿ ಒತ್ತಾಯಿಸಿದರು.
ಸೇವಾಲಾಲ್ ದೇವಸ್ಥಾನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 45 ಲಕ್ಷ ಬಂಜಾರ ಜನಸಂಖ್ಯೆ ಕರ್ನಾಟಕದಲ್ಲಿದ್ದು, ಡಿಕೆ ಶಿವಕುಮಾರ್ ಮಂತ್ರಿಮಂಡಲದಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜ್ಯ ಸರ್ಕಾರ ಮಹಾಪ್ರಮಾಧ ಎಸಗಿದಂತೆ ಎಂದರು.
ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಪ್ರಾತಿನಿಧ್ಯ ನೀಡಿಲ್ಲ. ಈಗ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ನಮ್ಮ ಸಮಾಜಕ್ಕೆ ಆದ್ಯತೆ ನೀಡಬೇಕು. ರುದ್ರಪ್ಪ ಲಮಾಣಿ, ಅವರು ಮೂರು ಸಾರಿ ಶಾಸಕ ಹಾಗೂ ಒಮ್ಮೆ ಡೆಪ್ಯೂಟಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅತ್ಯಂತ ಹಿರಿಯ ಹಾಗೂ ಅನುಭವಿ ರಾಜಕಾರಣಿಯಾಗಿರುವ ಅವರು ಸಚಿವರಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವುದನ್ನು ಬಂಜಾರ ಸಮುದಾಯ ಅತ್ಯಂತ ಕಾತುರದಿಂದ ಕಾಯುತ್ತಿದೆ ಎಂದರು.
ಬಂಜಾರ ಸಮಾಜದ ಅತ್ಯಂತ ಕ್ರಿಯಾಶೀಲ ರಾಜಕಾರಣಿ ಅರವಿಂದ ಚವ್ಹಾಣ ಅವರಿಗೆ ಈ ಬಾರಿ ವಿಧಾನ ಪರಿಷತ್ತು ಸದಸ್ಯರನ್ನಾಗಿ ಆಯ್ಕೆ ಮಾಡಬೇಕು ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಬಂಜಾರ ಸಮುದಾಯದ ಭಾವನೆಗೆ ಸ್ಪಂದಿಸುತ್ತಿರುವ ಅಭಿವೃದ್ಧಿಯ ದೂರದೃಷ್ಟಿ ಇರುವ ನಾಯಕ ಪ್ರಿಯಾಂಕ್ ಅವರು ಬಂಜಾರರ ಹಲವು ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಅನುದಾನವಿಲ್ಲದೇ ಅರ್ಧಕ್ಕೆ ನಿಂತಿದ್ದ ಬಂಜಾರ ಸಮುದಾಯ ಭವನ ಪೂರ್ಣಗೊಳಿಸಲು ನಾವು ಸಲ್ಲಿಸಿದ್ದ ಮನವಿಗೆ ತಕ್ಷಣ ಸ್ಪಂದಿಸಿ 80 ಲಕ್ಷ ಅನುದಾನ ಬಿಡುಗಡೆ ಮಾಡಿ ಅವಶ್ಯಕತೆ ಇದ್ದರೆ ಹೇಳಿ ಮತ್ತೆ ಹಣ ಒದಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಈ ಕೂಡಲೇ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು, ಅರವಿಂದ ಚವ್ಹಾಣ ಅವರನ್ನು ವಿಧಾನ ಪರಿಷತ್ತು ಸದಸ್ಯರಾಗಿ ಘೋಷಣೆ ಮಾಡಬೇಕು ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಅವರು ಅಗ್ರಹಿಸಿದರು.
ಕಾರ್ಯದರ್ಶಿ ಸೋಮು ಚವ್ಹಾಣ, ಕಾರ್ಯದರ್ಶಿ ಸೋಮು ಚವ್ಹಾಣ, ಕಿಶಾನ ಪವಾರ, ಸೇವಾನಾಯಕ, ಬಾಳು ಚವ್ಹಾಣ, ಅಂಬದಾಸ್ ಜಾಧವ ಮಾಜಿ ಸದಸ್ಯ, ಆನಂದ ರಾಠೋಡ, ಲಖನ್ ಚವ್ಹಾಣ ಇದ್ದರು.






