ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಪರಿಹಾರದಲ್ಲಿ ಅನ್ಯಾಯ ಖಂಡಿಸಿ ಜೂನ್ 9ರಂದು ಹೋರಾಟ: ಡಾ.ಮಹೇಶಕುಮಾರ್ ರಾಠೋಡ

ಕಲಬುರಗಿ: ಮಲ್ಲಾಬಾದ್ ಏತ ನೀರಾವರಿ ಯೋಜನೆಯ 2ನೇ ಹಂತದ ಪರಿಹಾರ ನೀಡುವಲ್ಲಿ ರೈತರಿಗೆ ಅನ್ಯಾಯವಾದರೆ ಜೂನ್ 9ರಂದು ಜೇವರ್ಗಿಯಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಮಲ್ಲಾಬಾದ್ ಏತ ನೀರಾವರಿ ರೈತ ಹೋರಾಟ ಸಮಿತಿ ಮುಖಂಡ ಡಾ.ಮಹೇಶಕುಮಾರ್ ರಾಠೋಡ ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ರೈತರ ಬಹುದಿನದ ಬೇಡಿಕೆಯಾಗಿರುವ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಕಾಮಗಾರಿ ಆರಂಭವಾಗಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಯೋಜನೆಯ ನೆಪದಲ್ಲಿ ಗುತ್ತಿಗೆದಾರರು ಭೂಸ್ವಾಧೀನ ಕಾನೂನುಗಳನ್ನು ಗಾಳಿಗೆ ತೂರಿ, ರೈತರಿಗೆ ಸೂಕ್ತ ಪರಿಹಾರ ನೀಡದೆ ಏಕಪಕ್ಷೀಯವಾಗಿ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ ಎಂದರು.
ಪರಿಹಾರ ನೀಡದೆ ಭೂಮಿ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂಬ ಕರ್ನಾಟಕ ಹೈಕೋರ್ಟ್ ಆದೇಶ ಇದೆ ಮತ್ತು ರೈತರ ಭೂಮಿ ವಶಪಡಿಸಿಕೊಳ್ಳುವಾಗ ಕಾಯ್ದೆಯನ್ವಯ ಸಾಮಾಜಿಕ ಪರಿಣಾಮದ ಅಧ್ಯಯನ, ಸಾರ್ವಜನಿಕ ವಿಚಾರಣೆ ಮತ್ತು ನ್ಯಾಯಸಮ್ಮತ ಪರಿಹಾರ ಕಲ್ಪಿಸುವುದು ಕಡ್ಡಾಯ ಎಂಬ ನಿಯಮವೂ ಇದೆ. ಆದರೆ,ಇಲ್ಲಿನ ಅಧಿಕಾರಿಗಳು ಎಲ್ಲವನ್ನೂ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿ ಅವರ ಸಮ್ಮುಖದಲ್ಲಿ ಸರ್ವೇ ಮಾಡಿ ಕಾಮಗಾರಿ ಮಾಡದೆ ಏಕಪಕ್ಷೀಯವಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ದೂರಿದರು.
ಜೇವರ್ಗಿ ಮತ್ತು ಯಡ್ರಾಮಿ ತಹಸೀಲ್ದಾರರು ಕೂಡಲೇ ರೈತ ಮುಖಂಡರ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕು. ಭೂಸ್ವಾಧೀನ ಕಾಯ್ದೆ-2013ರ ಅನ್ವಯ ಮಾರುಕಟ್ಟೆ ದರ, ಬೆಳೆ ಪರಿಹಾರ, ಮರಗಳ ಪರಿಹಾರ ಹಾಗೂ ಬೋರ್‌ವೆಲ್/ಪಂಪ್‌ಸೆಟ್‌ಗಳಿಗೆ ಸೂಕ್ತ ಪರಿಹಾರ ನೀಡಬೇಕು. ಯೋಜನೆ ಕುರಿತ ಮಾಹಿತಿಗಳನ್ನು ರೈತರಿಗೆ ಪಾರದರ್ಶಕವಾಗಿ ತಿಳಿಸಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಭೆ ಕರೆಯದಿದ್ದರೆ ಮತ್ತು ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಜೂ.9ರಂದು ಜೇವರ್ಗಿಯಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಇಬ್ರಾಹಿಂ ಪಟೇಲ್ ಯಾಳವಾರ, ಬಾಬು ಪಾಟೀಲ, ಸಾಜಿದ್ ಅಹ್ಮದ್, ರಾಜಾ ಪಟೇಲ ಯಾಳವಾರ, ಅಜೀಜ್ ಪಟೇಲ್, ಮಹಮ್ಮದ್ ಚೌದರಿ ಕೊಡಚಿ, ಇತರರಿದ್ದರು.






