ಕಲಬುರಗಿ | ವ್ಯಕ್ತಿಯೋರ್ವನ ಕೊಲೆ ಪ್ರಕರಣ : 9 ವರ್ಷಗಳ ಬಳಿಕ ಪತ್ನಿ ಸೇರಿ ಐವರು ಆರೋಪಿಗಳ ಬಂಧನ

ಕಲಬುರಗಿ : ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ನಿವಾಸಿ ಬೀರಪ್ಪ ಪೂಜಾರಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 9 ವರ್ಷಗಳ ಬಳಿಕ ಬೀರಪ್ಪ ಪೂಜಾರಿ ಪತ್ನಿ ಸಹಿತ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಮಾಹಿತಿ ನೀಡಿದ್ದು, ಕಡಣಿ ಗ್ರಾಮದ ನಿವಾಸಿಗಳಾದ ಮಹೇಶ್ ಪಾಂಡು ರಾಠೋಡ್, ಸುರೇಶ್ ಅಲಿಯಾಸ್ ಕಾಂತು ಶಂಕರ ರಾಠೋಡ್, ಸಿದ್ದು ಮಲ್ಲಣ್ಣ, ಶಂಕರ ಬಿಚಗತ್ತಿ ಹಾಗೂ ಬೀರಪ್ಪನ ಪತ್ನಿ ಶಾಂತಾಬಾಯಿ ಬಂಧಿತ ಆರೋಪಿಗಳಾಗಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮತ್ತಷ್ಟು ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಬೇಕಿದೆ ಎಂದು ಹೇಳಿದ್ದಾರೆ.
ಕಡಣಿ ಗ್ರಾಮದ ನಿವಾಸಿಯಾಗಿರುವ ಬೀರಪ್ಪ ಪೂಜಾರಿ 2016ರಲ್ಲಿ ಮೃತಪಟ್ಟಿದ್ದ. ಬೀರಪ್ಪ ಪತ್ನಿ ಶಾಂತಾಬಾಯಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಇತರ ಆರೋಪಿಗಳ ಜೊತೆ ಸೇರಿ ಕೊಲೆ ಮಾಡಿದ್ದಳು.
ಆರಂಭದಲ್ಲಿ ಬೀರಪ್ಪ ಅವರದ್ದು ಸಹಜ ಸಾವು ಎಂದು ಭಾವಿಸಲಾಗಿತ್ತು. ಆದರೆ, ಇತ್ತೀಚೆಗೆ ಆರೋಪಿಯೋರ್ವನ ಸಂಭಾಷಣೆ ಹರಿದಾಡಿತ್ತು. ಇದರ ಬೆನ್ನಲ್ಲೆ ಬೀರಪ್ಪ ಅವರ ಸಹೋದರ ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು.





