ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕಲಬುರಗಿಯಲ್ಲಿ ಬೃಹತ್ ಯೋಗ ನಡಿಗೆ

ಕಲಬುರಗಿ: 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ ಹಾಗೂ ವಿವಿಧ ಯೋಗ ಸಂಸ್ಥೆಗಳು, ಆಯುಷ್ ಕಾಲೇಜುಗಳು ಮತ್ತು ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ನಗರದಲ್ಲಿ ಬೃಹತ್ ಯೋಗ ಜಾಗೃತಿ ಜಾಥಾ (ಯೋಗ ನಡಿಗೆ) ನಡೆಯಿತು.
ಜೂನ್ 21ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಜಗತ್ ವೃತ್ತದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನಶೈಲಿಯಲ್ಲಿ ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಪರಿಣಾಮಕಾರಿ ಸಾಧನವಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಜಗತ್ ವೃತ್ತದಿಂದ ಆರಂಭವಾದ ಯೋಗ ನಡಿಗೆಯು ಅನ್ನಪೂರ್ಣ ಕ್ರಾಸ್, ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾಗಿತು. ಜಾಥಾದುದ್ದಕ್ಕೂ ನೂರಾರು ಯೋಗಾಸಕ್ತರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿ ಯೋಗದ ಮಹತ್ವವನ್ನು ಸಾರಿದರು.
ಘೋಷಣಾ ಫಲಕಗಳ ಮೂಲಕ ಜಾಗೃತಿ :
ಜಾಥಾದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮತ್ತು ಯೋಗಪಟುಗಳು “ಕಾಯಕಲ್ಪಕ್ಕೆ ಯೋಗ”, “ರೋಗ ಮುಕ್ತಿಗೆ ಯೋಗ”, “ಮನಸ್ಸಿನ ನಿಯಂತ್ರಣಕ್ಕೆ ಯೋಗವೇ ಮದ್ದು”, “ಆರೋಗ್ಯವೇ ಭಾಗ್ಯ, ಯೋಗವೇ ಸೌಭಾಗ್ಯ”, “ನಿತ್ಯ ಯೋಗಾಭ್ಯಾಸದಿಂದ ದೂರವಾಗಬಹುದು ಎಲ್ಲ ದುರಭ್ಯಾಸಗಳು” ಎಂಬ ಸಂದೇಶಗಳಿರುವ ಫಲಕಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ಯೋಗದ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿಗಳು, ವಿವಿಧ ಆಯುಷ್ ಕಾಲೇಜುಗಳ ವಿದ್ಯಾರ್ಥಿಗಳು, ಡಾ. ಎ.ಬಿ. ಮಾಲಕರಡ್ಡಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಹಾಗೂ ನೂರಾರು ಯೋಗಾಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶರಣಬಸಪ್ಪ ಖ್ಯಾತನಾಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಅಧಿಕಾರಿ ಸಂಗಮೇಶ, ಶಿಕ್ಷಣ ಇಲಾಖೆಯ ಶಂಕ್ರಮ್ಮ ಢವಳಗಿ, ರಾಜು ನಾಯಕ, ಆಯುಷ್ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀಶೈಲ ಪಾಟೀಲ್, ಪತಂಜಲಿ ಯೋಗ ಸಮಿತಿಯ ವಿಜಯಕುಮಾರ ಸಾಲಿಮಠ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಗಿಣಿ ಅಕ್ಕ ಹಾಗೂ ಶರಣಬಸಪ್ಪ ಹೀರಾ, ಗುಲ್ಬರ್ಗಾ ವಿಶ್ವವಿದ್ಯಾಲಯದ ಯೋಗ ತರಬೇತಿದಾರ ಚಂದ್ರಕಾಂತ ಬಿರಾದಾರ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.






