ತೊಗರಿಗೆ ಮೌಲ್ಯವರ್ಧಿತ ಬೆಲೆಗೆ ಯೋಜನೆ: ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಕಲಬುರಗಿ: ಜಿಲ್ಲೆಯಲ್ಲಿ ಬೆಳೆಯುವ ಉತ್ಕೃಷ್ಠ ತೊಗರಿಯನ್ನು ಬಳಸಿಕೂಂಡು ಮೌಲ್ಯವರ್ಧನೆಯ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮಾರುಕಟ್ಟೆ ಸೃಷ್ಟಿಸಿ, ರೈತರಿಗೆ ಹೆಚ್ಚಿನ ಬೆಲೆ ಒದಗಿಸಿಕೊಡಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ತೊಗರಿ ಮೌಲ್ಯವರ್ಧನೆಗೆ ಬೇಕಾದ ಸಂಶೋಧನೆ, ತಾಂತ್ರಿಕ ನೆರವಿನ ವ್ಯವಸ್ಥೆ ಸೇರಿದಂತೆ ಅಗತ್ಯವಿರುವ ಉಪಕ್ರಮಗಳನ್ನು ಕೈಗೊಳ್ಳಲು ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷರಾದ ಸೈಯದ್ ಮಹಮೂದ್ ಚಿಸ್ತಿ (ಸಾಹೇಬ್) ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಯಾವುದೇ ಕೃಷಿ ಉತ್ಪನ್ನಗಳನ್ನು ಸ್ಥಳೀಯವಾಗಿ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಸೃಷ್ಟಿಸಿದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದು ಮತ್ತು ಗ್ರಾಮೀಣ ಉದ್ಯಮಶೀಲತೆಯನ್ನು ವೃದ್ಧಿಸಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಡಿ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಧಾರಣೆಯನ್ನೂ ಒದಗಿಸಬಹುದು ಹಾಗೂ ಈ ನಿಟ್ಟಿನಲ್ಲಿ ಸ್ಥಳೀಯ ಮೌಲ್ಯವರ್ಧನೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ತೊಗರಿ ಕಣಜ ಎಂದೇ ಹೆಸರುವಾಸಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಯು ವಿಶಿಷ್ಠ ರುಚಿ, ವಿಭಿನ್ನ ಪರಿಮಳ ಮತ್ತು ದೀರ್ಘಕಾಲ ಬಾಳಿಕೆ ಬರುವ ಉತ್ತಮ ಗುಣಮಟ್ಟದ ಕಾರಣದಿಂದಾಗಿ GI ಟ್ಯಾಗ್ ಪಡೆದು ಜಾಗತಿಕವಾಗಿ ತನ್ನದೇ ಆದ ಸ್ಥಾನ ಮತ್ತು ಹೆಗ್ಗುರುತನ್ನು ಪಡೆದಿದೆ ಎಂದು ತಿಳಿಸಿದರು.







