ಸರಕಾರಿ ಉದ್ಯೋಗಗಳ ನಕಲಿ ನೇಮಕಾತಿ ಜಾಲಗಳ ಬಗ್ಗೆ ಎಚ್ಚರ : ಸಚಿವ ಪ್ರಿಯಾಂಕ ಖರ್ಗೆ

ಪ್ರಿಯಾಂಕ್ ಖರ್ಗೆ
ಕಲಬುರಗಿ : ರಾಜ್ಯವ್ಯಾಪಿ ಸರಕಾರಿ ಹುದ್ದೆಗಳ ನಕಲಿ ನೇಮಕಾತಿ ಆದೇಶ ನೀಡುವ ಜಾಲಗಳು ಸಕ್ರಿಯವಾಗಿದ್ದು, ಸಾರ್ವಜನಿಕರು ಇಂತಹ ಜಾಲಗಳ ಕುರಿತಂತೆ ಎಚ್ಚರಿಕೆಯಿಂದ ಇರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮನವಿ ಮಾಡಿದ್ದಾರೆ.
ಇತ್ತೀಚಿಗೆ ರಾಜ್ಯಾದ್ಯಾಂತ ತಲೆ ಎತ್ತಿರುವ ಈ ನಕಲಿ ನೇಮಕಾತಿ ಆದೇಶಗಳ ಜಾಲ ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಹೆಸರು ಬಳಸಿಕೊಂಡು ಸರಕಾರಿ ಉದ್ಯೋಗಕಾಂಕ್ಷಿಗಳಿಂದ ಹಣ ಪಡೆದು ನಕಲಿ ನೇಮಕಾತಿ ಆದೇಶ ನೀಡಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಈಗಾಗಲೇ ದೂರು ದಾಖಲಾಗಿದೆ. ಪ್ರಕರಣ ಜಾಲ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.
ಸರಕಾರಿ ಉದ್ಯೋಗಗಳ ಕುರಿತು ಸರಕಾರ ಅಧಿಕೃತವಾಗಿ ಬಹಿರಂಗವಾಗಿ ಹೊರಡಿಸುವ ಅಧಿಸೂಚನೆಗಳನ್ನು ಅನುಸರಿಸಿ ಅರ್ಜಿ ಹಾಕಿ ಪರೀಕ್ಷೆ ಬರೆಯುವ ಮೂಲಕ ಉದ್ಯೋಗ ಪಡೆಯಬಹುದಾಗಿದೆ. ಸರಕಾರ ಯಾವುದೇ ಹುದ್ದೆಗಳನ್ನು ಗುಪ್ತವಾಗಿ ಆಯ್ಕೆ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ನೌಕರಿ ಆಮೀಷ ಒಡ್ಡಿದರೆ ದೂರು ಕೊಡಿ:
ಸರಕಾರಿ ನೌಕರಿಯ ಆಮೀಷದ ಕುರಿತಂತೆ ಎಚ್ಚರವಾಗಿರಬೇಕು. ಇಂತಹ ಜಾಲತಾಣಗಳ ಕುರಿತು ಮಾಹಿತಿ ಅಥವಾ ಆಮೀಷಗಳನ್ನು ವಂಚಕರು ಒಡ್ಡಿದಾಗ ಕೂಡಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಅಥವಾ ಜಿಲ್ಲಾ ಪೊಲೀಸ್ ಅಧಿಕಾರಿಗಳ ಕಚೇರಿಯಲ್ಲಿ ದೂರು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದ್ದಾರೆ.







