ಹೈಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಅಗತ್ಯ ಕ್ರಮವಹಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

ಕಲಬುರಗಿ: ಕರ್ನಾಟಕ ಉಚ್ಛ ನ್ಯಾಯಾಲಯದ ಬೆಂಗಳೂರು, ಕಲಬುರಗಿ ಹಾಗೂ ಧಾರವಾಡ ವಿಭಾಗೀಯ ಪೀಠಗಳಲ್ಲಿ ಸರಕಾರದ ವಿವಿಧ ಇಲಾಖೆಗಳ ನೇಮಕಾತಿ, ಮುಂಬಡ್ತಿ ಹಾಗೂ ವಿವಿಧ ಸೇವಾ ವಿಷಯಗಳಿಗೆ ಸಂಬಂಧಿಸಿದ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅಗತ್ಯ ಕ್ರಮವಹಿಸುವಂತೆ ಆಗ್ರಹಿಸಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಸರಕಾರದ ವಿವಿಧ ಇಲಾಖೆಗಳ ನೇಮಕಾತಿ, ಮುಂಬಡ್ತಿ ಹಾಗೂ ವಿವಿಧ ಸೇವಾ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳು ಹಲವಾರು ವರ್ಷಗಳಿಂದ ಬಾಕಿ ಉಳಿದಿರುತ್ತವೆ. ಇದರಿಂದಾಗಿ ಇಲಾಖೆಗಳಲ್ಲಿ ನಿಗದಿತ ಕಾಲಮಿತಿಯೊಳಗೆ ನೇಮಕಾತಿ ಮತ್ತು ಮುಂಬಡ್ತಿಗಳು ನಡೆಯದೆ ಅಭ್ಯರ್ಥಿಗಳು ಅವಕಾಶ ವಂಚಿತರಾಗಿ ಅನ್ಯಾಯಕೊಳ್ಳಗಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಭ್ಯರ್ಥಿಗಳು ಹಾಗೂ ನೌಕರರ ಭವಿಷ್ಯದ ಹಿತದೃಷ್ಟಿಯಿಂದ ಕರ್ನಾಟಕ ಉಚ್ಚನ್ಯಾಯಲಯದ ವಿವಿಧ ವಿಭಾಗೀಯ ಪೀಠಗಳಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಸ್ಪಷ್ಟವಾದ ಅಗತ್ಯ ಮಾಹಿತಿಯನ್ನು ಕಾಲಮಿತಿಯೊಳಗೆ ಸಲ್ಲಿಸಲು ಹಾಗೂ ಸರಕಾರಿ ವಕೀಲರೊಂದಿಗೆ ಸಮನ್ವಯ ಸಾಧಿಸಿ ಎಲ್ಲಾ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.







