ಬ್ಯಾಂಕ್ ಶಾಖಾ ವ್ಯವಸ್ಥಾಪಕರೊಂದಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಸಭೆ
ಸ್ವ-ಸಹಾಯ ಸಂಘಗಳಿಗೆ ನಿಗದಿತ ಗುರಿಯಂತೆ ಬ್ಯಾಂಕ್ ಸಾಲ ವಿತರಣೆಗೆ ಕ್ರಮವಹಿಸಲು ಸೂಚನೆ

ಕಲಬುರಗಿ : ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ್ ಆರ್.ಪಾಟೀಲ್ ಅವರು, ನಗರದ ಐವಾನ್ ಶಾಹಿ ಅತಿಥಿಗೃಹದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಎನ್.ಆರ್.ಎಲ್.ಎಮ್. (NRLM) ಯೋಜನೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಸ್ವ-ಸಹಾಯ ಸಂಘಗಳ ಬ್ಯಾಂಕ್ ಲಿಂಕೇಜ್ ಕುಂಠಿತದ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ ಅವರು, ಮುಂದಿನ ಒಂದು ತಿಂಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಮತ್ತು ಜಿಪಿಎಲ್ಎಫ್ ಪದಾಧಿಕಾರಿಗಳು ಸಭೆ ನಡೆಸಿ, ಜಿಲ್ಲೆಯ ನಿಗದಿತ ಗುರಿಯಂತೆ ಸ್ವ-ಸಹಾಯ ಸಂಘಗಳಿಗೆ ಬ್ಯಾಂಕ್ ಸಂಪರ್ಕ ಮೂಲಕ ಸಾಲ ವಿತರಣೆ ಮಾಡಲು ಕ್ರಮವಹಿಸಬೇಕು ಎಂದರು.
ಗ್ರಾಮ ಮಟ್ಟದಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಂಡು ಗೃಹಲಕ್ಷ್ಮಿ ಫಲಾನುಭವಿಗಳು, ನರೇಗಾ ಫಲಾನುಭವಿಗಳು ಮತ್ತು ಅರ್ಹ ಫಲಾನುಭವಿಗಳು ಸೇರ್ಪಡೆಗೆ ಸೂಕ್ತ ಕ್ರಮವಹಿಸಬೇಕು. ನಿಯಮಾನುಸಾರ ಜಿಪಿಎಲ್ಎಫ್ ವಾರ್ಷಿಕ ಸಭೆ ಮತ್ತು ಅವಧಿ ಪೂರ್ಣವಾದ ಪದಾಧಿಕಾರಿಗಳ ಬದಲಾವಣೆ ಮಾಡಿ ಸಮುದಾಯ ಬಂಡವಾಳ ನಿಧಿ ಸರ್ಮಪಕವಾಗಿ ಬಳಕೆ ಮಾಡಲು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಸಾಮಾಜಿಕ ಆಂದೋಲನ ಅಭಿಯಾನದ ಮೂಲಕ ಸ್ವ-ಸಹಾಯ ಸಂಘದಿಂದ ಹೊರಗುಳಿದ ಕುಟುಂಬಗಳಲ್ಲಿ 70,000 ಮಹಿಳಾ ಸದಸ್ಯರನ್ನು ಸ್ವ-ಸಹಾಯ ಸಂಘದಲ್ಲಿ ಸೇರ್ಪಡೆಗೆ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯ ಎನ್ಆರ್‌ಎಲ್ಎಂ ಸ್ವ-ಸಹಾಯ ಸಂಘಗಳಿಗೆ ಬ್ಯಾಂಕ್ ಲಿಂಕೇಜ್ ಮೂಲಕ ಒಟ್ಟು 25 ಕೋಟಿ ರೂ. ಗಳ ಸಾಲ ಸೌಲಭ್ಯ ಒದಗಿಸಲಾಗಿದ್ದು, ಕೃಷಿ ಜೀವನೋಪಾಯ ಮತ್ತು ಕೃಷಿಯೇತರ ಜೀವನೋಪಾಯ ಚಟುವಟಿಕೆಯಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರು ತೊಡಗಿರುವ ಆದಾಯ ಉತ್ಪನ್ನ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಡಿಎಸ್ಡಿಓ, ಜಿಟಿಟಿಸಿ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು, ಡಿಎಂಎಂಯು ಟಿಎಂಎಂಯು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಲಬುರಗಿ ಜಿಪಂ ಡಿಆರ್ಡಿಎ ಯೋಜನಾ ನಿರ್ದೇಶಕ ಜಗದೇವ ಸ್ವಾಗತಿಸಿದರು. ಡಿಪಿಎಂ ರಾದ ಲೋಹಿತ ಅವರು ವಂದಿಸಿದರು.







