ಕಲಬುರಗಿ | 90.02 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ

ಕಲಬುರಗಿ: ದಕ್ಷಿಣ ವಿಧಾನಸಭಾ ಕ್ಷೇತ್ರದ ನಗರದ ರಾಜಾಪೂರ ವಾರ್ಡ್ ನಂ. 47ರಲ್ಲಿ ಒಟ್ಟು 90.02 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ರವಿವಾರ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
2025-26ನೇ ಸಾಲಿನ ಕೆ.ಕೆ.ಆರ್.ಡಿಬಿ ಯೋಜನೆಯಡಿ 20.02 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಕಾಮಗಾರಿ, ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 45 ಲಕ್ಷ ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಹಾಗೂ 25 ಲಕ್ಷ ವೆಚ್ಚದಲ್ಲಿ 12 ಜ್ಯೋತಿರ್ಲಿಂಗ ದೇವಸ್ಥಾನದ ಸಮೀಪ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ್, ರಾಜಾಪೂರ ವಾರ್ಡ್‌ನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಿದ್ದು, ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ಸಮುದಾಯ ಭವನ, ಗ್ರಂಥಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸ್ಥಳೀಯ ಜನರಿಗೆ ಅನುಕೂಲವಾಗಲಿದ್ದು, ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಲಿಂಗರಾಜ್ ಕಣ್ಣಿ, ಸಿದ್ದಾರ್ಥ ಟ್ರಸ್ಟ್ ಅಧ್ಯಕ್ಷ ಭೀಮರಾವ್ ತೇಗಲತಿಪ್ಪಿ, ಪ್ರಧಾನ ಕಾರ್ಯದರ್ಶಿ ಮಹಾಂತಪ್ಪ ಸಂಗವಿ, ಮಾಜಿ ಮೇಯರ್ ರವೀಂದ್ರನಾಥ್ ಹೊನ್ನಳ್ಳಿ, ಸುರೇಶ್ ಜಾಧವ್, ಚಂದ್ರಶೇಖರ ಹಾವೇರಿ, ಶಿವಲಿಂಗಪ್ಪ ಜಕ್ನಳ್ಳಿ, ಸಿದ್ದು ಹಿರೇಮಠ, ರಾಹುಲ್ ಹೊನ್ನಳ್ಳಿ, ಸೂರ್ಯಕಾಂತ ನಿಲೂರ್, ಮಲ್ಲಿಕಾರ್ಜುನ ಕನ್ವರಕರ್, ಕಿರಣ್ ವಾಲೀಕರ್, ಪ್ರಶಾಂತ್ ಕಾಂತಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.






