4 ಕೋಟಿ ರೂ. ವೆಚ್ಚದ ರಸ್ತೆ, ಸೇತುವೆ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮಡು ಚಾಲನೆ

ಕಮಲಾಪೂರ : ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೂಲಸೌಕರ್ಯ ವೃದ್ಧಿಯೇ ಮೊದಲ ಆದ್ಯತೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ಕಲಕುಟಗಾ ಕ್ರಾಸ್‌ನಿಂದ ಬಾದ ಹಿಪ್ಪರಗಾ ಗಡಿವರೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣ ಮತ್ತು ಕಲಕುಟಗಾ ಕ್ರಾಸ್‌ನಿಂದ ಕಲಕುಟಗಾ ಗ್ರಾಮದವರೆಗೆ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಾಸಕರಾಗಿ ಆಯ್ಕೆಯಾದ ಬಳಿಕ ವಿವಿಧ ಯೋಜನೆಗಳಡಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.
ಕಲಕುಟಗಾ ಗ್ರಾಮದ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕಾಗಿ ಸುಮಾರು 4 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಇದೀಗ ಅಧಿಕೃತ ಚಾಲನೆ ನೀಡಲಾಗಿದೆ. ರಸ್ತೆ ಮತ್ತು ಸೇತುವೆ ನಿರ್ಮಾಣದಿಂದ ಮಳೆಗಾಲದಲ್ಲಿ ಉಂಟಾಗುತ್ತಿದ್ದ ಸಂಚಾರ ಸಮಸ್ಯೆ ಹಾಗೂ ಸಾರ್ವಜನಿಕರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಹೇಳಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಮಶೋದ್ದೀನ್ ಪಟೇಲ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಾಜ್ಜೋದ್ದೀನ್ ಪಟೇಲ್, ದಸ್ತಗೀರ್ ಮುಜಾವರ, ಮಲ್ಲಿಕಾರ್ಜುನ ಮರತೂರಕರ್, ಗಂಗಪ್ಪಗೌಡ ಪಾಟೀಲ, ಚೆನ್ನು ಮುನ್ನಳಿ, ಉದಯ ಪಾಟೀಲ, ಸತೀಶ ಸೊರಡೆ, ಸತೀಶ ಪೂಜಾರಿ, ಶಿವಾನಂದ ಪಾಟೀಲ, ಚಂದ್ರಕಾಂತ ಬಿರಾದಾರ, ವಿಜಯಕುಮಾರ ಪಾಟೀಲ, ಲಿಂಗಶೆಟ್ಟಿ ಜಮಾದಾರ, ಶರಣಪ್ಪ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






