ಎನ್‌ಡಿಆರ್‌ಎಫ್ ಮೊತ್ತದೊಂದಿಗೆ ರಾಜ್ಯದ ಪಾಲು ಸೇರಿಸಿ ನೊಂದ ರೈತರಿಗೆ ಹೆಚ್ಚುವರಿ ಪರಿಹಾರ : ಸಿಎಂಗೆ ಶಾಸಕ ಡಾ.ಅಜಯ್ ಧರ್ಮಸಿಂಗ್ ಅಭಿನಂದನೆ

ಕಲಬುರಗಿ : ರಾಷ್ಟ್ರೀಯ ಪ್ರಕೃತಿ ವಿಕೋಪ ನಿಯಮದ ಪ್ರಕಾರ ಖುಷ್ಕಿ ಜಮೀನಿಗೆ ಹೆಕ್ಟೇರ್ ಗೆ 8,500 ರೂ, ನೀರಾವರಿ ಜಮೀನಿಗೆ ಹೆಕ್ಟೇರ್ ಗೆ 17 ಸಾವಿರ ರೂ., ಬಹು ವಾರ್ಷಿಕ ಬೆಳೆಗೆ 22,500 ರೂ. ಇದ್ದು, ಈ ಪರಿಹಾರದ ಮೊತ್ತದ ಜೊತೆಗೆ ಸಿಎಂ ಸಿದ್ದರಾಮಯ್ಯನವರು ರಾಜ್ಯ ಸರ್ಕಾರದ ಪಾಲಿನ ರೂಪದಲ್ಲಿ ಹೆಚ್ಚುವರಿಯಾಗಿ ಪ್ರತೀ ಹೆಕ್ಟೇರ್ ಗೆ 8,500 ರೂ. ಪರಿಹಾರ ಘೋಷಿಸಿರುವುದರಿಂದ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ನೊಂದ ರೈತರ ಸಮೂಹಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ರೈತರ ಪರವಾಗಿ ನಿರ್ಣಯ ಪ್ರಕಟಿಸಿರುವ ಸಿದ್ದರಾಮಯ್ಯನವರನ್ನು ಅಭಿನಂದಿಸುವುದಾಗಿ ಕೆಕೆಆರ್‌ಡಿಬಿ ಅದ್ಯಕ್ಷರು ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಧರ್ಮಸಿಂಗ್ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಡಾ.ಅಜಯ್ ಸಿಂಗ್ ಅವರು, ಇದರಿಂದಾಗಿ ಕೃಷಿ ಜಮೀನಿಗೆ ಹೆಕ್ಟೇರ್ ಗೆ 8,500 ರೂ. + 8,500 ರೂ. ಸೇರಿ ಒಟ್ಟು 17,000 ರೂ., ನೀರಾವರಿ ಜಮೀನಿಗೆ 17,000 ರೂ. + 8,500 ರೂ. ಸೇರಿ ಒಟ್ಟು 25,500 ರೂ, ಹಾಗೂ ಬಹುವಾರ್ಷಿಕ ಬೆಳೆಗೆ ಹೆಕ್ಟೇರ್ ಗೆ 22,500 ರೂ. + 8,500 ರೂ. ಸೇರಿ ಒಟ್ಟು 31,000 ಸಾವಿರ ರೂ. ಪರಿಹಾರ ರೂಪದಲ್ಲಿ ರೈತರಿಗೆ ದೊರಕಲಿದೆ.
10 ಲಕ್ಷ ಹೆಕ್ಟರ್ ಬೆಳೆಹಾನಿಗೆ ಹೆಚ್ಚುವರಿ ಪಾಲು ಸೇರಿಸಿ 2,500 ಕೋಟಿ ರೂ. ನಷ್ಟ ಪರಿಹಾರ ಹಣ ನೊಂದವರ ಕೈ ಸೇರಲಿದೆ. ಸಮೀಕ್ಷೆ ಮುಗಿದ ತಕ್ಷಣ ಹಣ ಬಿಡುಗಡೆಯಾಗೋದಾಗಿ ಸಿದ್ದರಾಮಯ್ಯನವರು ಹೇಳಿದ್ದು, ಅದರಂತೆ ರೈತರು ಧೈರ್ಯದಿಂದ ಇದ್ದು, ಸಂಕಷ್ಟವನ್ನು ಎದುರಿಸಬೇಕು. ರಾಜ್ಯ ಸರ್ಕಾರ ಸದಾಕಾಲ ಬಡವರು, ರೈರ ಪರವಾಗಿದೆ ಎಂದು ಡಾ.ಅಜಯ್ ಸಿಂಗ್ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ ಇದುವರೆಗೆ ಸುಮಾರು 9,60,578 ಹೆಕ್ಟೇರುಗಳಷ್ಟು ಬೆಳೆ ಹಾನಿಯಾಗಿದೆ. ಇದರಲ್ಲಿ 8,88,953 ಹೆಕ್ಟೇರುಗಳಷ್ಟು ಕೃಷಿ ಬೆಳೆಗಳು ಮತ್ತು 71,624 ಹೆಕ್ಟೇರುಗಳಷ್ಟು ತೋಟಗಾರಿಕಾ ಬೆಳೆಗಳು ನಷ್ಟವಾಗಿದೆಯೆಂಬುದು ಪ್ರಾಥಮಿಕ ಅಂದಾಜು ಇದೆ.
ಪೂರ್ಣ ಪ್ರಮಾಣದ ಸಮೀಕ್ಷೆಯ ನಂತರ ಈ ಪ್ರಮಾಣ ಹೆಚ್ಚೂ ಆಗಬಹುದು. ಇದುವರೆಗಿನ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 9,60,578 ಹೆಕ್ಟೇರುಗಳಷ್ಟು ಬೆಳೆ ಹಾನಿಯಾಗಿದ್ದರೆ, ಉತ್ತರ ಕರ್ನಾಟಕದ ಈ 8 ಜಿಲ್ಲೆಗಳಲ್ಲಿಯೇ 9,03,966 ಹೆಕ್ಟೇರುಗಳಷ್ಟು ಬೆಳೆಹಾನಿ ಸಂಭವಿಸಿದೆ. ಶೇ.95 ರಷ್ಟು ಹಾನಿ ಈ ಜಿಲ್ಲೆಗಳಲ್ಲಿಯೇ ಸಂಭವಿಸಿದೆ. ಕಳೆದ ಎರಡು ತಿಂಗಳಿಂದ ನೆಲ ಒಣಗದಂತೆ ಮಳೆಯಾಗುತ್ತಿದೆ. ರೈತರು ಯಾವುದೇ ಕಾರಣಕ್ಕೂ ಧೃತಿಗೆಡದೆ ಪರಿಹಾರ ಕ್ರಮಗಳಿಗೆ ಸಹಕರಿಸಿ ಹೊಸ ಬದುಕು ಕಟ್ಟಿಕೊಳ್ಳಲಿ ಎಂದು ಡಾ.ಅಜಯ್ ಸಿಂಗ್ ರೈತರಲ್ಲಿ ಮನವಿ ಮಾಡಿದ್ದಾರೆ.







