ಉರ್ದು ಶಿಕ್ಷಕರ ಖಾಲಿ ಹುದ್ದೆಗಳನ್ನು ನೇಮಕಾತಿಗೆ ಸೇರಿಸಲು ಸಿಎಂಗೆ ಶಾಸಕಿ ಖನೀಜ್ ಫಾತಿಮಾ ಆಗ್ರಹ

ಕಲಬುರಗಿ: ಕಲಬುರಗಿ ವಿಭಾಗದಲ್ಲಿ ಖಾಲಿ ಇರುವ ಉರ್ದು ಮಾಧ್ಯಮದ ವಿಷಯವಾರು ಶಿಕ್ಷಕರ ಹುದ್ದೆಗಳನ್ನು ಪ್ರಸ್ತುತ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸೇರ್ಪಡೆಗೊಳಿಸಿ ತಿದ್ದುಪಡಿ ಅಧಿಸೂಚನೆ ಹೊರಡಿಸುವಂತೆ ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಹಾಗೂ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷೆ ಖನೀಜ್ ಫಾತಿಮಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಆ.14ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಇಲಾಖಾವಾರು ಹಾಗೂ ವೃಂದವಾರು ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ಜು.6ರಂದು ಮನವಿ ಸಲ್ಲಿಸಲಾಗಿತ್ತು. ಆದರೆ ಆ.11ರಂದು ಪ್ರಕಟಿಸಲಾದ ವಿಶೇಷ ರಾಜ್ಯಪತ್ರದಲ್ಲಿನ ಶಿಕ್ಷಕರ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಿದಾಗ, ಕಲಬುರಗಿ ವಿಭಾಗದಲ್ಲಿ ಉರ್ದು ಮಾಧ್ಯಮದ ಹಲವು ವಿಷಯವಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಪ್ರಸ್ತುತ ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸಿಲ್ಲ ಎಂದು ತಿಳಿಸಿದ್ದಾರೆ.
ಕಲಬುರಗಿ ವಿಭಾಗದಲ್ಲಿ ಉರ್ದು ಮಾಧ್ಯಮದ ಶಿಕ್ಷಕರ ಖಾಲಿ ಹುದ್ದೆಗಳ ನೇಮಕಾತಿಗೆ ಕಳೆದ 12ರಿಂದ 15 ವರ್ಷಗಳಿಂದ ಸೂಕ್ತ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ಈ ಭಾಗದ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ.
ಆದ್ದರಿಂದ ಆ.11ರಂದು ಹೊರಡಿಸಿರುವ ಶಿಕ್ಷಕರ ನೇಮಕಾತಿ ಅಧಿಸೂಚನೆಯನ್ನು ಮಾರ್ಪಡಿಸಿ, ಕಲಬುರಗಿ ವಿಭಾಗದಲ್ಲಿ ವಿಷಯವಾರು ಖಾಲಿ ಇರುವ ಉರ್ದು ಮಾಧ್ಯಮದ ಶಿಕ್ಷಕರ ಹುದ್ದೆಗಳನ್ನು ತಕ್ಷಣ ನೇಮಕಾತಿ ಪ್ರಕ್ರಿಯೆಗೆ ಸೇರ್ಪಡೆಗೊಳಿಸಬೇಕು. ಈ ಸಂಬಂಧ ತಿದ್ದುಪಡಿ ಅಧಿಸೂಚನೆ ಹೊರಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕನೀಜ್ ಫಾತಿಮಾ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.






