ಮೋದಿಯವರ "ಅಮೃತ್ ಕಾಲ್" ಕೇವಲ ಅಂಬಾನಿ, ಅದಾನಿಗೆ ಮಾತ್ರ: ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಲಬುರಗಿ: ಡಾಲರ್ ಎದುರು ರೂಪಾಯಿ ಗಣನೀಯ ಕುಸಿತ ಕಂಡಿದೆ. ದೇಶದಲ್ಲಿ 2 ಲಕ್ಷ ಎಂ.ಎಸ್.ಎಂ.ಇ.ಗಳು ಮುಚ್ಚಿವೆ. 'ಅಮೃತ್ ಕಾಲ್, ' ವಿಕಸಿತ್ ಭಾರತ್ ' ಯೋಜನೆಗಳೆಲ್ಲ ಅದಾನಿ, ಅಂಬಾನಿ ಅವರ ಬೆಳವಣಿಗೆಗೆ ಬಿಡುವ ಪ್ರಧಾನಿ ಮೋದಿ, ಜನರಿಗಾಗಿ ತಮ್ಮ ಎಲ್ಲ ಜವಾಬ್ದಾರಿಯನ್ನು ಮರೆತುಬಿಟ್ಟಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ನೋಡಿದರೆ, ದೇಶದ ಆರ್ಥಿಕ ಸ್ಥಿತಿ ಚೆನ್ನಾಗಿದೆ ಅಂತ ಎನಿಸುತ್ತದೆಯೇ? ಎಲ್ಲವೂ ಅದಾನಿ, ಅಂಬಾನಿಗೆ ಬಿಟ್ಟರೆ, ಸ್ವಚ್ಛ ಭಾರತ್, ಮನ್ ಕೀ ಬಾತ್ ಮಾತ್ರ ಜನರಿಗೆ ಬಿಟ್ಟಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯ ಯೋಜನೆಗಳಿಗೆ ಕೇಂದ್ರ ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದಿರುವುದಕ್ಕೆ ಜಲ್ ಜೀವನ ಮಿಷನ್ ನಂತ ಪ್ರಮುಖ ಯೋಜನೆ ಜಾರಿಯಲ್ಲಿ ಕುಂಠಿತವಾಗುತ್ತಿದೆ. ಒದಗಿಸುವ ಯೋಜನೆಗೆ ಕಳೆದ ಸಾಲಿನಲ್ಲಿ ಬರಬೇಕಾಗಿದ್ದ ರೂ. 2,500 ಕೋಟಿ ಅನುದಾನದಲ್ಲಿ ಕೇಂದ್ರ ಕೇವಲ ರೂ 517 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು. ಆದರೆ, ರಾಜ್ಯದ ಜನರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಉಳಿದ ಹಣವನ್ನು ಭರಿಸಿತ್ತು. ಆದರೆ ಈ ಸಲವೂ ಕೂಡಾ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಯೋಜನೆ ಜಾರಿಯಲ್ಲಿ ಕುಂಠಿತವಾಗುತ್ತಿದೆ ಎಂದರು. ರಾಜ್ಯಕ್ಕೆ ಈಗ ರೂ 13,000 ಕೋಟಿ ಅನುದಾನ ಅಗತ್ಯವಿದೆ. ಕೇಂದ್ರಕ್ಕೆ ಕನ್ನಡಿಗರು ಕಟ್ಟುವ ತೆರಿಗೆ ಮಾತ್ರ ಬೇಕು ಹೊರತು, ಕನ್ನಡಗಿರಿಗೆ ವಾಪಸ್ ನೀಡುವುದು ಅದಕ್ಕೆ ಬೇಕಿಲ್ಲ ಎಂದರು.
ಎರಡು ಬಾರಿ ಆಯ್ಕೆಯಾದ ಹಣಕಾಸು ಸಚಿವೆಯಿಂದ ರಾಜ್ಯಕ್ಕೆ ಕೊಡುಗೆ ಏನು?:
15 ನೇ ಹಣಕಾಸು ಆಯೋಗದಲ್ಲಿ ನೀಡಬೇಕಾದ ಅನುದಾನ ಬಿಡುಗಡೆ ಮಾಡಿಲ್ಲ. ನರೇಗಾ ಯೋಜನೆಯಡಿಯಲ್ಲಿ ರಾಜ್ಯ ಸ್ಥಾಪಿಸಲಾದ "ಕೂಸಿನ ಮನೆ " ಯೋಜನೆಯಡಿಯಲ್ಲಿ ಕೆಲಸ ಮಾಡುವ ಕೇರ್ ಟೇಕರ್ ಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಕಲಬುರಗಿ ಹಾಗೂ ಬೀದರ್ ನಗರಗಳಿಗೆ ಕುಡಿಯುವ ನೀರು ಒದಗಿಸುವ ರೂ 6,000 ಕೋಟಿ ವೆಚ್ಚದ ರಾಜ್ಯ ಸರ್ಕಾರದ ಮಹತ್ತರ ಕುಡಿಯುವ ಯೋಜನೆ ಜಾರಿಗಾಗಿ ಕೂಡಾ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಜಿಎಸ್ ಟಿ, ರಾಷ್ಟ್ರೀಯ ಹೆದ್ದಾರಿಗಳಿಗಾಗಿ ಬೇಕಾಗುವ ಅನುದಾನ ಬಿಡುಗಡೆಗಾಗಿ ಕೇಂದ್ರ ಅಸಹಕಾರ ತೋರಿಸುತ್ತಿದೆ. ರಾಜ್ಯದಿಂದ ಎರಡು ಬಾರಿ ಆಯ್ಕೆಯಾಗಿ ಹೋದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ಸಂಸದರು ಈ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು.
ಆರೆಸ್ಸೆಸ್ ಗುರುದಕ್ಷಿಣೆ ಸ್ವೀಕರಿಸಿದ್ದಕ್ಕೆ ಲೆಕ್ಕ ಬೇಡವಾ?:
ಆರೆಸ್ಸೆಸ್ ಆದಾಯದ ಬಗ್ಗೆ ಪ್ರಶ್ನೆ ಮಾಡಿದ ಪ್ರಿಯಾಂಕ್ ಖರ್ಗೆ, ಗುರುದಕ್ಷಿಣೆ ಮಾತ್ರ ಸ್ವೀಕರಿಸಲಾಗುತ್ತಿದೆ ಎಂದು ಆರೆಸ್ಸೆಸ್ ಪ್ರಮಖರು ಹೇಳುತ್ತಾರೆ. ಅವರ ಗುರು ಎಂದರೆ ಧ್ವಜ ಎಂದು ಹೇಳುತ್ತಾರೆ, ಧ್ವಜದ ಹೆಸರಲ್ಲಿ ಸ್ವೀಕರಿಸಿದ ಹಣಕ್ಕೂ ಲೆಕ್ಕ ಬೇಕಲ್ಲ? ಎಂದು ಪ್ರಶ್ನಿಸಿದರು.
ನ್ಯಾಷನಲ್ ಹೆರಾಲ್ಡ್, ಯಂಗ್ ಇಂಡಿಯಾ ರಾಜಕೀಯ ಪ್ರೇರಿತ ಪ್ರಕರಣ:
ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಪ್ರಕರಣಗಳು ರಾಜಕೀಯ ಪ್ರೇರಿತ ಎಂದ ಸಚಿವರು, " ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ" ( Prevention of Money Laundering Act ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡಾ ಹಣ ಎಲ್ಲಿಂದ ಬಂತು? ಎಲ್ಲಿಗೆ ಹೋಗಿದೆ? ಎನ್ನುವುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಎಐಸಿಸಿ ಅಧ್ಯಕ್ಷರಾಗಿ ಮೂರು ವರ್ಷವಾಯಿತು, ಅವರಿಗೂ ನೋಟಿಸೂ ಕೊಟ್ಟಿದ್ದಾರೆ. ಹಾಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೂ ನೋಟಿಸು ಜಾರಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ಆರ್ಥಿಕ ವ್ಯವಸ್ಥೆ ದುರ್ಬಲ ಆದಾಗೆಲ್ಲಾ ಮೋದಿ ಸರ್ಕಾರ ಈ ತರ ನೋಟಿಸು ಜಾರಿ ಮಾಡುತ್ತದೆ. ರಾಹುಲ್ ಗಾಂಧಿ, ರಾಬರ್ಟ್ ವಾದ್ರಾ ಮೇಲೂ ಕೇಸು ಹಾಕಿತ್ತು ಎಂದು ಆರೋಪಿಸಿದರು.
ಬಿಜೆಪಿ ಪಕ್ಷ ತನ್ನ ನಾಯಕರ ಭ್ರಷ್ಟಾಚಾರಗಳ ಬಗ್ಗೆ ಚಕಾರ ಎತ್ತಲ್ಲ. ಅಜಿತ್ ಕುಮಾರ್ ಅವರ ಬಗ್ಗೆ ಅತೀಭ್ರಷ್ಟ ಎಂದು ಕರೆದಿದ್ದ ಬಿಜೆಪಿ ಈಗ ಅವರ ಅಳಿಯನ ಮೇಲೆ ರೂ 1,700 ಕೋಟಿ ಭ್ರಷ್ಟಾಚಾರದ ಆರೋಪ ಬಂದಿದೆ. ಆ ಬಗ್ಗೆ ಬಿಜೆಪಿ ಮಾತನಾಡಲ್ಲ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರನ್ನ ಪ್ರಪಂಚ ಕಡು ಭ್ರಷ್ಟ ಎಂದು ಆಗ ಬಿಜೆಪಿ ಕರೆದಿತ್ತು. ಈಗ ಅವರೇ ಬಿಜೆಪಿ ಸರ್ಕಾರದ ಸಿಎಂ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಕೇಂದ್ರ ಸರ್ಕಾರ ಸಾಮಾಜಿಕ, ಆರ್ಥಿಕ ಸಮೀಕ್ಷೆ ಮಾಡಲಿ:
ಕೇಂದ್ರ ಸರ್ಕಾರದ ಉದ್ದೇಶಿತ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ಯಾಕೆ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದ ಸಚಿವರು, 2021ರಲ್ಲೇ ಆಗಬೇಕಿದ್ದ ಸರ್ವೆ 2025 ಆದರೂ ಮುಗಿಯುತ್ತಿಲ್ಲ. ನಮ್ಮ ಸರ್ಕಾರ ಯಾವುದಾದರೂ ಯೋಜನೆ ಮುಗಿಸಲು 1 ವರ್ಷ ಅವಧಿ ನಿಗದಿಪಡಿಸಿದರೆ. ಮೋದಿ ಅವರ ಎಲ್ಲಾ ಯೋಜನೆಗಳು 2047 ರ ಯೋಜನೆಗಳಾಗಿವೆ ಎಂದರು.
ವಿಮಾನ ಹಾರಾಟ ರದ್ದು ಕೇಂದ್ರದ ಹೊಣೆಗಾರಿಕೆ:
ಪ್ರಸ್ತುತ ಇಂಡಿಗೋ ವಿಮಾನ ಹಾರಾಟ ರದ್ದಾದ ವಿಚಾರ ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ಈ ವಿಚಾರದಲ್ಲಿ ಕೇಂದ್ರದ ಹೊಣೆಗಾರಿಕೆ ಇಲ್ಲವೇ? ಹವಾಯಿ ಚಪ್ಪಲಿ ಹಾಕುವವರೂ ಕೂಡಾ ವಿಮಾನದಲ್ಲಿ ಓಡಾಡುವಂತೆ ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ಈಗ ವಿಮಾನ ನಿಲ್ದಾಣಗಳಲ್ಲಿ ಚಪ್ಪಲಿ ಹಾರಾಡುವಂತೆ ಆಗಿದೆ ಎಂದರು.
ಕೇಂದ್ರ ಸಚಿವ ಎಚ್.ಡಿ. ಕುಮಾರ ಸ್ವಾಮಿ ಅವರು ಶಾಲಾ ಪಠ್ಯಗಳಲ್ಲಿ ಭಗವದ್ಗೀತೆ ಸೇರಿಸಬೇಕು ಎಂದು ಪತ್ರ ಬರೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಅವರು ಸಿಎಂ ಇದ್ದಾಗ ಮಾಡಬಹುದಿತ್ತಲ್ಲ ? ಆರೆಸ್ಸೆಸ್ ಬಗ್ಗೆ ಅವರು ಒಂದು ದೊಡ್ಡದಾದ ಆರ್ಟಿಕಲ್ ಅನ್ನು ಪತ್ರಿಕೆಯೊಂದಕ್ಕೆ ಬರೆದಿದ್ದರು. ಅವರ ಆರ್ಟಿಕಲ್ ನಲ್ಲಿ ಪಸ್ತಾಪಿಸಿರುವ ಎಲ್ಲ ವಿಚಾರಗಳ ಬಗ್ಗೆ ನನಗೆ ಒಪ್ಪಿಗೆ ಇದೆ ಎಂದರು.
ಸಂಪ್ರದಾಯ ಮುರಿದ ಪ್ರಧಾನಿ ಮೋದಿ:
ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿಯಲ್ಲಿ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸದೇ ಇರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಇದ್ದ ಸಂಪ್ರದಾಯವನ್ನು ಮೋದಿ ಮುರಿದಿದ್ದಾರೆ. ಯಾಕೆಂದರೆ ಪುಟಿನ್ ಅವರೊಂದಿಗೆ ತೆಗೆಸಿಕೊಳ್ಳುವ ಫೋಟೋ ಫ್ರೇಮ್ ನಲ್ಲಿ ಅವರೊಬ್ಬರೇ ಕಾಣಿಸಿಕೊಳ್ಳಬೇಕಲ್ಲ ಎಂದು ಕುಟಿಕಿದರು. ಆದರೂ, ಶಶಿ ತರೂರ್ ಗೆ ಆಹ್ವಾನವಿದೆಯಲ್ಲ ? ಎಂದು ಪತ್ರಕರ್ತರು ಕೇಳಿದಾಗ, ಅವರ ನಡುವೆ ಏನಿದೆಯೋ ನನಗೆ ಗೊತ್ತಿಲ್ಲ ಎಂದು ಸಚಿವರು ಮರುತ್ತರ ನೀಡಿದರು.
ಆದಾಯ ತೆರಿಗೆ ಪಾವತಿಸಿ ವಾಚ್ ಕಟ್ಟಬಾರದಾ?:
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಮಾರ್ ಅವರು ಒಂದೇ ತರ ದುಬಾರಿ ಬೆಲೆಯ ವಾಚ್ ಧರಿಸಿರುವ ವಿಚಾರ ಮುನ್ನೆಲೆಗೆ ಬಂದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಯಾಕೆ ಒಂದೇ ತರ ವಾಚ್ ಧರಿಸಬಾರದಾ? ಆದಾಯ ತೆರಿಗೆ ಸರಿ ಇದ್ದರೆ ವಾಚ್ ಧರಿಸಲು ಏನು ಸಮಸ್ಯೆ ಇದೆ. ಮೋದಿ ಕೈಯಲ್ಲೇ ಎಲ್ಲ ತನಿಖೆ ಸಂಸ್ಥೆಗಳು ಇವೆಯಲ್ಲ ಅದಕ್ಕೂ ಒಂದು ನೋಟಿಸು ನೀಡಲಿ. ಮೋದಿ ಹತ್ತು ಲಕ್ಷದ ಸೂಟ್ ಧರಿಸಿದ್ದನ್ನ ಮಾಧ್ಯಮದವರು ಯಾಕೆ ಪ್ರಶ್ನಿಸುವುದಿಲ್ಲ ಎಂದು ಮರುಪ್ರಶ್ನೆ ಕೇಳಿದರು.
ಗ್ರಾಪಂ ವ್ಯಾಪ್ತಿಯ ಆಸ್ತಿಗಳ ತೆರಿಗೆ ವಸೂಲಿ:
ಗ್ರಾಮಪಂಚಾಯತಿ ವ್ಯಾಪ್ತಿಯ ಆಸ್ತಿಗಳ ತೆರಿಗೆ ವಸೂಲಿ ಕಾರ್ಯ ನಡೆಯುತ್ತಿದೆ. ಕಳೆದ ಬಾರಿ ರೂ. 1,272 ಕೋಟಿ ತೆರಿಗೆ ವಸೂಲಾಗಿದೆ. ಈ ಸಲ ರೂ 3,500 ಕೋಟಿ ದಾಟಬಹುದು. ರಾಜ್ಯದಲ್ಲಿ ಒಟ್ಟು 95 ಲಕ್ಷಕ್ಕೂ ಅಧಿಕ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಈ ವೇಳೆ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತೀಮಾ, ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಜರ್ ಅಹಮದ್ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಕೆಕೆಆರ್ ಟಿಸಿ ಅಧ್ಯಕ್ಷ ಅರುಣ್ ಕುಮಾರ ಎಂ.ವೈ ಪಾಟೀಲ್ ಸೇರಿದಂತೆ ಹಲವರಿದ್ದರು.







