ಸನ್ನತಿ, ಕಲಬುರಗಿ ಕೋಟೆ ಸಂರಕ್ಷಣೆಗೆ ಎಎಸ್‌ಐ ಅಧಿಕಾರಿಗಳೊಂದಿಗೆ ಸಂಸದ ರಾಧಾಕೃಷ್ಣ ದೊಡ್ಡಮನಿ ಚರ್ಚೆ

ನವದೆಹಲಿ: ಕಲಬುರಗಿ ಲೋಕಸಭಾ ಕ್ಷೇತ್ರದ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣೆ (ಎಎಸ್‌ಐ) ಪ್ರಧಾನ ಕಚೇರಿಯಲ್ಲಿ ಎಎಸ್‌ಐ ಮಹಾನಿರ್ದೇಶಕ ಯದುಬೀರ್ ಸಿಂಗ್ ರಾವತ್ ಹಾಗೂ ಹೆಚ್ಚುವರಿ ಮಹಾನಿರ್ದೇಶಕ (ಸಂರಕ್ಷಣೆ) ಜಾನ್ವಿಜ್ ಶರ್ಮಾ ಅವರನ್ನು ಭೇಟಿಯಾಗಿ ಕಲಬುರಗಿ ಜಿಲ್ಲೆಯ ಐತಿಹಾಸಿಕ ತಾಣಗಳ ಸಂರಕ್ಷಣೆ ಕುರಿತು ಚರ್ಚಿಸಿದರು.
ಸಭೆಯಲ್ಲಿ ಕಲಬುರಗಿ ಜಿಲ್ಲೆಯ ಪ್ರಮುಖ ಬೌದ್ಧ ಪುರಾತತ್ವ ತಾಣವಾದ ಸನ್ನತಿ ಹಾಗೂ ಐತಿಹಾಸಿಕ ಕಲಬುರಗಿ ಕೋಟೆಯ ಸಂರಕ್ಷಣೆ, ಜೀರ್ಣೋದ್ಧಾರ ಮತ್ತು ಸಮಗ್ರ ಅಭಿವೃದ್ಧಿ ಕುರಿತು ವಿಸ್ತೃತವಾಗಿ ಸಮಾಲೋಚನೆ ನಡೆಸಲಾಯಿತು.
ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವ ಹೊಂದಿರುವ ಪಾರಂಪರಿಕ ತಾಣಗಳನ್ನು ಕಾಲಮಿತಿಯಲ್ಲಿ ಸಂರಕ್ಷಿಸಿ ಅಭಿವೃದ್ಧಿಪಡಿಸುವ ಅಗತ್ಯವನ್ನು ಸಂಸದ ರಾಧಾಕೃಷ್ಣ ದೊಡ್ಡಮನಿ ಅಧಿಕಾರಿಗಳ ಗಮನಕ್ಕೆ ತಂದರು.
ಸಂಸದರ ಮನವಿಗೆ ಸ್ಪಂದಿಸಿದ ಎಎಸ್‌ಐ ಹಿರಿಯ ಅಧಿಕಾರಿಗಳು, ಪ್ರಸ್ತಾಪಿತ ವಿಷಯಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಲಬುರಗಿಯ ಪುರಾತತ್ವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ, ಪ್ರವಾಸೋದ್ಯಮದ ದೃಷ್ಟಿಯಿಂದ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.






