ಕಲಬುರಗಿ-ಬೆಂಗಳೂರು ನಡುವಿನ ವಿಮಾನ ಸಂಚಾರ ಪುನಃ ಆರಂಭಿಸುವಂತೆ ಸಂಸದ ರಾಧಾಕೃಷ್ಣ ದೊಡ್ಡಮನಿ ಒತ್ತಾಯ

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣ ಮೂಲಕ ಬೆಂಗಳೂರಿಗೆ ತಕ್ಷಣ ವಿಮಾನ ಸಂಚಾರ ಪುನಃ ಆರಂಭಿಸುವಂತೆ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜಾರಪು ಅವರನ್ನು ಸಂಸದರಾದ ರಾಧಾಕೃಷ್ಣ ದೊಡ್ಡಮನಿ, ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸಂಸದರು ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಸಂಚಾರ ಪುನಃ ಆರಂಭಿಸುವುದು ಅವಶ್ಯಕವಾಗಿರುವ ಬಗ್ಗೆ ಮನವರಿಕೆ ಮಾಡಿದರು.
ಸ್ಟಾರ್ ಏರ್ ಲೈನ್ಸ್ ಸಂಸ್ಥೆ ಕಲಬುರಗಿಯಿಂದ ತನ್ನ ವಿಮಾನಯಾನ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದೆ. ಇದರಿಂದ ಕಲಬುರಗಿ ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಭಾಗಗಳ ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯಾಗಿದೆ ಎಂದು ರಾಧಾಕೃಷ್ಣ ದೊಡ್ಡಮನಿ ಅವರು ಹೇಳಿದ್ದಾರೆ.
ಕಲಬುರಗಿಯು ಕಲ್ಯಾಣ ಕರ್ನಾಟಕದ ಪ್ರಮುಖ ವ್ಯಾಣಿಜ್ಯ ಕೇಂದ್ರವಾಗಿದ್ದು, ಅದರ ಜೊತೆಗೆ ವಿಭಾಗೀಯ ಕೇಂದ್ರವಾಗಿದೆ. ಜಿಲ್ಲೆಯಲ್ಲಿ ಕೇಂದ್ರೀಯ ವಿವಿ ಸೇರಿದಂತೆ ನಾಲ್ಕು ವಿವಿಗಳಿದ್ದು, ಪ್ರಮುಖ ಶಿಕ್ಷಣ ಸಂಸ್ಥೆಗಳಿವೆ. ಸಾರ್ವಜನಿಕರು ಬೆಂಗಳೂರಿನೊಂದಿಗೆ ವ್ಯಾಪಾರ ಉದ್ಯೋಗ ಸೇರಿದಂತೆ ಶೈಕ್ಷಣಿಕ ಅವಶ್ಯಕತೆಗಳಿಗೆ ನಿರಂತರವಾಗಿ ಪ್ರಯಾಣ ಮಾಡುತ್ತಿದ್ದು, ಇದೀಗ ವಿಮಾನ ಸಂಚಾರ ಸ್ಥಗಿತಗೊಂಡಿದ್ದರಿಂದ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕೂಡಲೇ ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಸಂಚಾರ ಪುನಃ ಆರಂಭಿಸುವಂತೆ ಸಚಿವರಿಗೆ ಒತ್ತಾಯಿಸಿದರು.
ಕಲಬುರಗಿಯಿಂದ ಮುಂಬೈ ಹಾಗೂ ನವದೆಹಲಿ ವಿಮಾನ ಸಂಚಾರ ಪ್ರಾರಂಭಿಸುವಂತೆ ಇದೇ ಸಂದರ್ಭದಲ್ಲಿ ಸಂಸದರು ವಿಮಾನಯಾನ ಸಚಿವರನ್ನು ಕೋರಿದರು.
ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮೊಬೈಲ್ ಮೂಲಕ ಮಾತನಾಡಿ, ವಿಮಾನಯಾನ ಪುನಃ ಆರಂಭಿಸುವ ಕುರಿತು ಕೂಡಲೇ ಕ್ರಮವಹಿಸುವಂತೆ ಸೂಚಿಸಿದರು.
ನಂತರ, ಸಂಸದರೊಂದಿಗೆ ಮಾತನಾಡಿದ ಸಚಿವರು, ದೆಹಲಿಗೆ ವಾಪಸ್ ತೆರಳಿದ ನಂತರ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಯಚೂರು ಸಂಸದರಾದ ಜಿ.ಕುಮಾರ ನಾಯಕ ಇದ್ದರು.







