ಚಿಂಚೋಳಿಯಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ

ಚಿಂಚೋಳಿ: ತಾಲೂಕಿನಾದ್ಯಂತ ಮುಸ್ಲಿಂ ಹಾಗೂ ಹಿಂದೂ ಬಾಂಧವರು ಒಗ್ಗಟ್ಟಿನಿಂದ ಭಾಗವಹಿಸುವ ಮೂಲಕ ಮೊಹರಂ (ಪೀರ ಹಬ್ಬ)ವನ್ನು ಶ್ರದ್ಧಾಭಕ್ತಿ, ಸಡಗರ ಹಾಗೂ ಭಾವೈಕ್ಯತೆಯ ವಾತಾವರಣದಲ್ಲಿ ಆಚರಿಸಿದರು.
ನಗರ ಪ್ರದೇಶ ಸೇರಿದಂತೆ ಐನಾಪುರ, ಕರಕಮುಕಲಿ, ಕುಂಚಾವರಂ, ಸುಲೇಪೇಟ್, ಕೊಡ್ಲಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮೊಹರಂ ನಿಮಿತ್ತ ಪ್ರತಿಷ್ಠಾಪಿಸಲಾಗಿದ್ದ ಪೀರ ದೇವರಿಗೆ ಸಾರ್ವಜನಿಕರು ವಿಶೇಷ ಪೂಜೆ, ನೈವೇದ್ಯ ಹಾಗೂ ಧೂಪ-ದೀಪ ಬೆಳಗಿ ಭಕ್ತಿ ಸಮರ್ಪಿಸಿದರು.
ಚಿಂಚೋಳಿ ತಾಲೂಕಿನ ಮೊಹರಂ ಆಚರಣೆಯ ವಿಶೇಷತೆಯೆಂದರೆ, ಮುಸ್ಲಿಂ ಸಮುದಾಯದವರ ಜೊತೆಗೆ ಹಿಂದೂ ಸಮುದಾಯದವರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೀರ ದೇವರಿಗೆ ಹರಕೆ ಹೊತ್ತು ಭಕ್ತಿಭಾವ ವ್ಯಕ್ತಪಡಿಸಿದರು. ಜಾತಿ-ಮತ ಭೇದ ಮರೆತು ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವ ಮೂಲಕ ತಾಲೂಕಿನಲ್ಲಿ ಸೌಹಾರ್ದತೆಯ ವಾತಾವರಣ ಮನೆಮಾಡಿತ್ತು.
ಹಬ್ಬದ ಅಂಗವಾಗಿ ರಾತ್ರಿ ಜಾಗರಣೆ ನಡೆಸಿ, ಕೆಂಡದ ಹೊಂಡ (ಆಲಾವಿ) ಸುತ್ತ ಯುವಕರು ಹಾಗೂ ಹಿರಿಯರು ಡೋಲಿನ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ‘ಹುಸೇನ್ ದೂಲಾ’ ಎಂದು ಜಯಘೋಷ ಕೂಗಿದ ದೃಶ್ಯಗಳು ನೆರೆದಿದ್ದ ಸಾರ್ವಜನಿಕರ ಗಮನ ಸೆಳೆದವು.
ಮೊಹರಂ ಹಬ್ಬದ ಕೊನೆಯ ದಿನ ವಿವಿಧ ಪೀರ ದೇವಸ್ಥಾನಗಳಿಂದ ಪಂಜಾಗಳನ್ನು ಭವ್ಯ ಮೆರವಣಿಗೆಯ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬಳಿಕ ಸಮೀಪದ ಜಲಮೂಲಗಳಲ್ಲಿ ವಿಸರ್ಜನೆ ಮಾಡುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.
ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತ್ತು.
ಈ ಸಂಧರ್ಭದಲ್ಲಿ ಬಡಿದರ್ಗಾದ ಸಜ್ಜದೆ ನಶೀನ್ ಸೈಯದ್ ಶಾಹ ಅಕ್ಬರ್ ಹುಸೈನಿ, ಹಿರಿಯ ಮುಖಂಡ ಕೆ ಎಂ ಬಾರಿ, ಗೋಪಾಲರಾವ ಕಟೀಮನಿ, ಗೌತಮ್ ಪಾಟೀಲ್, ಎಸ್ ಕೆ ಮುಖತಿಯರ್,ಮೊಖದುಮ್ ಖಾನ್, ಅಬದುಲ ಹಾದಿ, ಬಸವರಾಜ ಶಾಬಾದ, ಸಲೀಮ್ ಸೌಧಗರ, ನರಸಪ್ಪ, ಅಯೂಬ್ ಖಾನ್, ಹಾಸನ ಹಾಶ್ಮಿ, ಸೇರಿದಂತೆ ತಾಲೂಕಿನ ಸುತ್ತಮುತ್ತ ಹಳ್ಳಿಯ ಭಕ್ತರು ಸಾಕ್ಷಿಯಾದರು.






