ಮುಲ್ಕಿ ತಾಲೂಕು ಮಟ್ಟದ 19 ರ ವಯೋಮಿತಿಯ ಬಾಲಕ-ಬಾಲಕಿಯರ ಕ್ರೀಡಾಕೂಟ: ಕಟೀಲು ಕಾಲೇಜು ಚಾಂಪಿಯನ್

ಮೂಡುಬಿದಿರೆ: ಕಾಟಿಪಳ್ಳ ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಅಧೀನದಲ್ಲಿರುವ ಹಸನಬ್ಬ ಮಾಸ್ಟರ್ ಪದವಿ ಪೂರ್ವ ಕಾಲೇಜಿನ ಆತಿಥ್ಯದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮುಲ್ಕಿ ತಾಲೂಕು ಮಟ್ಟದ 19ರ ವಯೋಮಿತಿಯ ಬಾಲಕ-ಬಾಲಕಿಯರ ಕ್ರೀಡಾಕೂಟ ಇತ್ತೀಚೆಗೆ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದ ಬಳಿಕ ಸಂಸ್ಥೆಯ ಚೇರ್ಮಾನ್ ಪಿ. ಅಬ್ದುಲ್ ಹಮೀದ್ ಅವರು ಪಾರಿವಾಳವನ್ನು ಹಾರಿಸುವ ಮೂಲಕ ಕ್ರೀಡಾಕೂಟವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಮೀಫ್ ಉಪಾಧ್ಯಕ್ಷರು ಹಾಗೂ ಸಂಸ್ಥೆಯ ಸಹ ಟ್ರಸ್ಟಿಗಳೂ ಆದ ಪರ್ವೇಜ್ ಅಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಪಣಂಬೂರು ಮುಸ್ಲಿಂ ಜಮಾಅತ್, ಕಾಟಿಪಳ್ಳ ಇದರ ಅಧ್ಯಕ್ಷರಾದ ಎಸ್. ರಹಮತುಲ್ಲಾ, ಕಾಲೇಜು ಪ್ರಿನ್ಸಿಪಾಲ್ ರೇಖಾ, ನೂರುಲ್ ಹುದಾ ಶಾಲಾ ಮುಖ್ಯೋಪಾಧ್ಯಾಯಿನಿ ಅರೀಫಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗುಲ್ನಾಜ್, ಸಂಚಾಲಕರಾದ ಅಬ್ದುಲ್ ಖಯ್ಯೂಮ್, ಪ್ರಧಾನ ಕಾರ್ಯದರ್ಶಿ ಅಷ್ಫಾಕ್ ಅಹ್ಮದ್, ಕೋಶಾಧಿಕಾರಿ ಮುಹಮ್ಮದ್ ಷರೀಫ್, ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್, ಹಳೆ ವಿದ್ಯಾರ್ಥಿ ನಾಯಕರಾದ ಸೈಫುಲ್ಲಾ ಮುಹಮ್ಮದ್ ಸೌದಿ ಅರೇಬಿಯಾ, ಮುಹಮ್ಮದ್ ತೌಸೀಫ್, ದೈಹಿಕ ಶಿಕ್ಷಣ ಶಿಕ್ಷಕಿ ಭವಾನಿ ಮುಂತಾದವರು ಉಪಸ್ಥಿತರಿದ್ದರು.
ಬಾಲಕರ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಪದವಿ ಪೂರ್ವ ಕಾಲೇಜು, ಕಟೀಲು ಚಾಂಪಿಯನ್ ಟ್ರೋಫಿಯನ್ನು ಪಡೆದುಕೊಂಡಿತು.






