ಕಲೆ-ಸಂಸ್ಕೃತಿ ಬೆಳೆಸುವುದಕ್ಕಿಂತ ಉಳಿಸಿಕೊಳ್ಳುವುದು ಮುಖ್ಯ: ಜಡಿಯಪ್ಪ ಗೆದ್ಲಗಟ್ಟಿ

ಕಲಬುರಗಿ: ಪ್ರಸ್ತುತ ಸಮಯದಲ್ಲಿ ಪ್ರತಿಯೊಬ್ಬ ಕಲಾವಿದ ಹಾಗೂ ಸಾರ್ವಜನಿಕರು ನಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸುವುದಕ್ಕಿಂತ ಅದನ್ನು ಮುಂದಿನ ಪೀಳಿಗೆಗಾಗಿ ಉಳಿಸಿಕೊಂಡು ಹೋಗುವುದು ಅತ್ಯಂತ ಮುಖ್ಯವಾದ ಜವಾಬ್ದಾರಿಯಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಹೇಳಿದರು.
ಗುರುವಾರ ನಗರದ ಕನ್ನಡ ಸಾಹಿತ್ಯ ಪರಿಷತ್ ಸುವರ್ಣ ಸಭಾ ಭವನದಲ್ಲಿ ಶ್ರೀ ಸಾಯಿ ಜನ ಜಾಗೃತಿ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸರಕಾರವು ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಬೀದಿ ನಾಟಕ, ಸಂಗೀತ ಕಾರ್ಯಕ್ರಮಗಳು, ರಂಗಾಯಣ ಸಂಸ್ಥೆಗಳ ಮೂಲಕ ಅತ್ಯುತ್ತಮ ಕೃತಿಗಳನ್ನು ರಂಗಭೂಮಿಗೆ ತರುವುದು ಹಾಗೂ ಗ್ರಾಮೀಣ ಮಟ್ಟದಲ್ಲಿ ಜಾನಪದ ಕಲೆಗಳನ್ನು ಪೋಷಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸರಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದರು.
ಹಿಂದಿನ ಕಾಲದಲ್ಲಿ ಪ್ರತಿಯೊಂದು ಊರಿನಲ್ಲೂ ಭಜನೆ ಮತ್ತು ಶೋಭಾನೆ ಪದಗಳನ್ನು ಹಾಡುವ ಕಲಾವಿದರು ಇಡೀ ಊರಿಗೆ ಪರಿಚಿತರಾಗಿರುತ್ತಿದ್ದರು. ಯಾವುದೇ ಶುಭ ಕಾರ್ಯಗಳಿದ್ದರೂ ಸಂಪೂರ್ಣ ರಾತ್ರಿ ಭಜನೆ ಮತ್ತು ಸೋಬಾನೆ ಪದಗಳನ್ನು ಹಾಡಿ ಸಂಭ್ರಮಿಸುತ್ತಿದ್ದರು.
ಆದರೆ, ಇಂದು ಕಾಲ ಬದಲಾಗಿದೆ. ತಂತ್ರಜ್ಞಾನ ಬೆಳೆದಿದೆ. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಫೋನ್ ಬಂದಿದ್ದು, ಮನೆಗೊಬ್ಬ ಕಲಾವಿದರು ಹುಟ್ಟಿಕೊಳ್ಳುತ್ತಿದ್ದಾರೆ. ಮೊಬೈಲ್, ರೇಡಿಯೋ, ಟಿವಿ ಹಾಗೂ ಸೋಶಿಯಲ್ ಮೀಡಿಯಾಗಳ ಮೂಲಕ ನಮ್ಮ ಕಲೆಯನ್ನು ಕೆಲವೇ ಕ್ಷಣಗಳಲ್ಲಿ ಪ್ರಪಂಚದಾದ್ಯಂತ ತಲುಪಿಸುವ ಸಾಧನಗಳು ನಮಗೆ ಸಿಕ್ಕಿವೆ ಎಂದು ತಿಳಿಸಿದರು.
ಅಭಿವ್ಯಕ್ತಿಗೊಳಿಸುವ ಸಾಧನಗಳು ಬದಲಾಗಿದ್ದರೂ, ಹಾಡು, ನೃತ್ಯ, ನಾಟಕ, ಬೀದಿ ನಾಟಕಗಳಂತಹ ಕಲೆಯ ಮೂಲ ಸತ್ವವು ಎಂದಿನಂತೆಯೇ ಇದೆ. ಮೊಬೈಲ್ ಮತ್ತು ಡಿಜಿಟಲ್ ಮಾಧ್ಯಮಗಳಿಂದಾಗಿ ಇಂದು ಹಳ್ಳಿಯ ಮೂಲೆಯಲ್ಲಿದ್ದ ಕಲಾವಿದನೊಬ್ಬ ಅಮೆರಿಕದವರೆಗೂ ಕ್ಷಣಮಾತ್ರದಲ್ಲಿ ಪ್ರಸಿದ್ಧಿ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಸರಕಾರ ಹಮ್ಮಿಕೊಳ್ಳುವ ಕಲಾ ಕಾರ್ಯಕ್ರಮಗಳು ಹೆಚ್ಚಿನ ಜನರನ್ನು ತಲುಪುವಂತಾಗಬೇಕು. ಕಲಾ ಕಾರ್ಯಕ್ರಮಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಜಾನಪದ, ಡೊಳ್ಳು, ಕಂಸಾಳೆ ಸೇರಿದಂತೆ ಎಲ್ಲಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಮೂಲ ಗುಣವನ್ನು ಕಾಪಾಡಿಕೊಂಡು ಉಳಿಸಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಸುಭಾಷ ಬನ್ನಪಟ್ಟಿ, ಮಣ್ಣೂರ ಗಂಗಾ ಮಾತೋಶ್ರೀ ಅಂಗವಿಕಲರ ಸಂಘ ಕಾರ್ಯದರ್ಶಿ ವೆಂಕಟೇಶ ಮಾಲಿಪಾಟೀಲ, ಮನೀಷ್ ಕನ್ನಡ ದಿನ ಪತ್ರಿಕೆ ಸಂಪಾದಕ ರಾಜು ದೇಶಮುಕ, ಮಿನುಗುತಾರೆ ಮಹಿಳಾ ಕಲಾವಿದರ ಸಂಘ ಅಧ್ಯಕ್ಷೆ ಕಲ್ಪನಾ ಗೋಲ್ಡ್ ಸ್ಮಿತ್, ಆಕಾಶವಾಣಿ ಕಲಾವಿದ ಬಸಯ್ಯ ಗುತ್ತೇದಾರ, ಜಯಶ್ರೀ ವಿ. ಗುತ್ತೇದಾರ, ನಿವೃತ್ತ ಶಿಕ್ಷಕ ಸುಗಂಧಾಬಾಯಿ ವೀರಭದ್ರಪ್ಪ ಪಸಾರ, ಪಿ.ಆರ್. ಪಾಂಡು, ಮಲ್ಲಿಕಾರ್ಜುನ ಆರ್.ಜಾನೆ ಉಪಸ್ಥಿತರಿದ್ದರು.






